ADVERTISEMENT

ಮೈಸೂರು–ವಿಶಾಖಪಟ್ಟಣಂ ನಡುವೆ ವಿಮಾನ ಸಂಪರ್ಕ

ಮೈಸೂರಿನಿಂದ ಎರಡನೇ ವಿಮಾನ ಹಾರಾಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 16:38 IST
Last Updated 7 ಜೂನ್ 2019, 16:38 IST
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌–3 ಯೋಜನೆಯಡಿ ಶುಕ್ರವಾರ ಆರಂಭಗೊಂಡ ವಿಶಾಖಪಟ್ಟಣಂ–ಮೈಸೂರು ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರುNew Alliance Air at the inaugural of the UDAN-3 Regional Connectivity Scheme on Bangalore- Mysore- Bangalore sector, organised by Airports Authority of India at Mysuru Airport in Mysuru on Friday. - PHOTO / SAVITHA B R
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌–3 ಯೋಜನೆಯಡಿ ಶುಕ್ರವಾರ ಆರಂಭಗೊಂಡ ವಿಶಾಖಪಟ್ಟಣಂ–ಮೈಸೂರು ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರುNew Alliance Air at the inaugural of the UDAN-3 Regional Connectivity Scheme on Bangalore- Mysore- Bangalore sector, organised by Airports Authority of India at Mysuru Airport in Mysuru on Friday. - PHOTO / SAVITHA B R   

ಮೈಸೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌–3 ಯೋಜನೆಯಡಿ, ಮೈಸೂರು ವಿಮಾನ ನಿಲ್ದಾಣದಿಂದ ಶುಕ್ರವಾರ ಎರಡನೇ ವಿಮಾನ ಹಾರಾಟ ನಡೆಸಿತು.

ವಿಶಾಖಪಟ್ಟಣಂದಿಂದ ಬೆಳಿಗ್ಗೆ 6.55ಕ್ಕೆ ಹೊರಟಿದ್ದ ಅಲಯನ್ಸ್‌ ಏರ್‌ ವಿಮಾನ ವಿಜಯವಾಡ, ಬೆಂಗಳೂರು ಮೂಲಕ ನಿಗದಿತ ವೇಳೆಗೂ ಮುನ್ನವೇ ಬೆಳಿಗ್ಗೆ 11.07ಕ್ಕೆ 33 ಪ್ರಯಾಣಿಕರನ್ನು ಹೊತ್ತು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಮೈಸೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ವಿಜಯವಾಡ, ವಿಶಾಖಪಟ್ಟಣಂಗೆ 46 ಪ್ರಯಾಣಿಕರನ್ನು ಹೊತ್ತ ವಿಮಾನ, ನಿಗದಿತ ವೇಳೆಗೂ ಕೊಂಚ ವಿಳಂಬವಾಗಿ ಮಧ್ಯಾಹ್ನ 12.25ಕ್ಕೆ ಹಾರಾಟ ನಡೆಸಿತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ವೇಳಾಪಟ್ಟಿ: ಮಂಗಳವಾರ, ಗುರುವಾರ ಹೊರತುಪಡಿಸಿ, ಉಳಿದ ಐದು ದಿನಗಳಲ್ಲಿ ಈ ವಿಮಾನ ಹಾರಾಟ ನಡೆಸಲಿದೆ. ನಿತ್ಯ ಬೆಳಿಗ್ಗೆ 6.55ಕ್ಕೆ ವಿಶಾಖಪಟ್ಟಣಂದಿಂದ ವಿಮಾನದ ಹಾರಾಟ ಆರಂಭಗೊಳ್ಳಲಿದೆ. 7.55ರ ವೇಳೆಗೆ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

ಬೆಳಿಗ್ಗೆ 8.20ಕ್ಕೆ ವಿಜಯವಾಡದಿಂದ ಹೊರಟು, 10 ಗಂಟೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. 10.30ಕ್ಕೆ ಬೆಂಗಳೂರಿನಿಂದ ಹೊರಟು 11.25ಕ್ಕೆ ಮೈಸೂರು ತಲುಪಲಿದೆ.

ಮಧ್ಯಾಹ್ನ 12ಕ್ಕೆ ಮೈಸೂರು ಬಿಡುವ ಅಲಯನ್ಸ್‌ ಏರ್‌ನ ವಿಮಾನ 1 ಗಂಟೆ ವೇಳೆಗೆ ಬೆಂಗಳೂರು ತಲುಪಲಿದೆ. ಅಲ್ಲಿಂದ 1.25ಕ್ಕೆ ಹೊರಟು, 2.55ಕ್ಕೆ ವಿಜಯವಾಡ ತಲುಪಲಿದೆ. ನಂತರ 3.25ಕ್ಕೆ ಬಿಟ್ಟು, ಸಂಜೆ 4.30ಕ್ಕೆ ವಿಶಾಖಪಟ್ಟಣಂ ತಲುಪಲಿದೆ ಎಂದು ಪ್ರಾಧಿಕಾರದ ಅಧಿಕಾರಿ ತಿಳಿಸಿದರು.

72 ಆಸನ ಸಾಮರ್ಥ್ಯದ ಅಲಯನ್ಸ್‌ ಏರ್‌ ವಿಮಾನದ ಅರ್ಧದಷ್ಟು ಸೀಟುಗಳು ಭರ್ತಿಯಾಗುವ ತನಕವೂ ಬೆಂಗಳೂರಿಗೆ ₹ 1500 ಟಿಕೆಟ್‌ ದರವಿದೆ. ನಂತರ ದರ ಬದಲಾಗಲಿದೆ. ಆರಂಭದ ಮೊದಲ ವಾರ ಮಾತ್ರ ಟಿಕೆಟ್‌ ದರ ₹ 1365 ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಸಚಿವರ ಸಭೆ: ವಿಮಾನ ಹಾರಾಟಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಂಸದ ಪ್ರತಾಪ್‌ಸಿಂಹ ವಿಮಾನ ನಿಲ್ದಾಣದ ವಿಸ್ತರಣೆ, ಅಭಿವೃದ್ಧಿಗಾಗಿ ಅಗತ್ಯವಿರುವ 280 ಎಕರೆ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳ ಜತೆ ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿಯಲ್ಲೇ ಸಭೆ ನಡೆಸಿದರು.

ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕು ಎಂದು ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.

ಶಾಸಕ ಎಸ್‌.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್‌, ಆಯುಕ್ತರಾದ ಶಿಲ್ಪಾನಾಗ್, ಮುಡಾ ಆಯುಕ್ತ ಕಾಂತರಾಜ್, ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ ಸಿಂಗ್, ವಿಮಾನ ನಿಲ್ದಾಣದ ಅಧಿಕಾರಿಗಳು ಸಮಾರಂಭದಲ್ಲಿದ್ದರು.

*
ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ಇದಲ್ಲ. ವಿವಿಧೆಡೆ ಸಂಪರ್ಕ ಕಲ್ಪಿಸುವ ಕೊಂಡಿ. ಮುಂದಿನ ಐದು ವರ್ಷದಲ್ಲಿ ಕನಿಷ್ಠ 20 ವಿಮಾನ ಹಾರಾಟ ನಡೆಸುವಂತೆ ಕ್ರಮ ತೆಗೆದುಕೊಳ್ಳಲಾಗುವುದು.
-ಪ್ರತಾಪ್‌ ಸಿಂಹ,ಸಂಸದ

*
ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ₹ 700 ಕೋಟಿ ಮೀಸಲಿಟ್ಟಿರುವುದು ಒಳ್ಳೆಯ ಬೆಳವಣಿಗೆ. ಮೈಸೂರಿನ ಪ್ರವಾಸೋದ್ಯಮಕ್ಕೆ ಉಡಾನ್‌ ಯೋಜನೆ ಪೂರಕವಾಗಿದೆ. ವಿವಿಧೆಡೆಯ ಸಂಪರ್ಕಕ್ಕೆ ಸಹಕಾರಿಯಾಗಲಿದೆ.
-ಜಿ.ಟಿ.ದೇವೇಗೌಡ,ಜಿಲ್ಲಾ ಉಸ್ತುವಾರಿ ಸಚಿವ

*
ಮೈಸೂರಿನ ಪ್ರವಾಸೋದ್ಯಮಕ್ಕೆ ಉಡಾನ್‌ ಯೋಜನೆಯಡಿ ನಡೆದಿರುವ ವಿಮಾನ ಹಾರಾಟ ಪೂರಕವಾಗಲಿದೆ. ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ.
-ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ

*
ಬೆಂಗಳೂರಿಗೆ ಬಾಡಿಗೆ ಟ್ಯಾಕ್ಸಿಯಲ್ಲಿ ಹೋಗಬೇಕು ಎಂದರೇ ₹ 2500 ಖರ್ಚಾಗಲಿದೆ. ಸಮಯವೂ ನಾಲ್ಕೈದು ಗಂಟೆ ಬೇಕಿದೆ. ವಿಮಾನ ಹಾರಾಟ ಆರಂಭವಾಗಿದ್ದು ಒಳ್ಳೆಯದು. ಸಮಯ–ದುಡ್ಡು ಎರಡೂ ಉಳಿತಾಯವಾಗಲಿದೆ.
-ಶ್ರೀನಿವಾಸ್‌ ಶರ್ಮಾ, ತೆರಿಗೆ ಸಲಹೆಗಾರರು, ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.