ಬೆಂಗಳೂರು: ‘ನನ್ನ ತಂದೆಯ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಆರೋಪಗಳು ಶುದ್ಧ ಸುಳ್ಳು’ ಎಂದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಹೇಳಿದ್ದಾರೆ.
‘ನಮ್ಮ ತಂದೆ ರಿಹರ್ಸಲ್ ವೇಳೆ ಮೈ ಮುಟ್ಟಿದ್ದಾರೆ, ನಂತರ ಊಟಕ್ಕೆ ಕರೆದಿದ್ದಾರೆ ಎಂದು ಶ್ರುತಿ ಆರೋಪ ಮಾಡಿದ್ದಾರೆ. ಇದು ಸುಳ್ಳು. ಒಂದು ವೇಳೆ ಇದು ನಿಜವಾಗಿದ್ದರೂ ಅದು ಲೈಂಗಿಕ ಕಿರುಕುಳವೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ವಿಸ್ಮಯ ಪ್ರೀಮಿಯರ್ ಶೋ ವೇಳೆ ನಿನ್ನ ತಂದೆ ಜತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಮತ್ತೊಮ್ಮೆ ಅವರ ಜತೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಅವರ ಮೇಲೆ ಕಿರುಕುಳ ಆಗಿದ್ದರೆ ಹೀಗೆ ಯಾಕೆ ಹೇಳಬೇಕಿತ್ತು’ ಎಂದರು.
ನಟ ಚೇತನ್ ವಿರುದ್ಧವೂ ಹರಿಹಾಯ್ದ ಐಶ್ವರ್ಯ, ‘ಚೇತನ್ ಹಾಗೂ ನಾನು ಒಟ್ಟಿಗೆ ಹಲವು ಶಿಬಿರಗಳನ್ನು ನಡೆಸಿದ್ದೇವೆ. ಆತನ ಜತೆ ಫೋಟೊ ಶೂಟ್ ಕೂಡ ಮಾಡಿದ್ದೇನೆ. ಆ ಸಮಯದಲ್ಲಿ ಆತ ನನ್ನ ಮೈ ಮುಟ್ಟಿದ್ದಾನೆ, ಊಟಕ್ಕೂ ಕರೆದಿದ್ದಾನೆ. ನಮ್ಮ ತಂದೆ ಮಾಡಿದ್ದು ಲೈಂಗಿಕ ಕಿರುಕುಳವಾದರೆ, ಚೇತನ್ ಮಾಡಿದ್ದೂ ಲೈಂಗಿಕ ಕಿರುಕುಳವಾಗುತ್ತದೆ ಅಲ್ಲವೆ’ ಎಂದರು.
ಮೂರು ಸ್ಥಳಗಳಲ್ಲಿ ಮಹಜರು
‘ಸರ್ಜಾ ವರ್ತನೆ ಬಗ್ಗೆ ಚಿತ್ರದ ನಿರ್ದೇಶಕರು, ಸಹ ನಿರ್ದೇಶಕರು ಹಾಗೂ ಕೆಲ ಸ್ನೇಹಿತರ ಬಳಿ ಚಿತ್ರೀಕರಣದ ಸಂದರ್ಭದಲ್ಲೇ ಹೇಳಿಕೊಂಡಿದ್ದಾಗಿ ಶ್ರುತಿ ಹೇಳಿದ್ದಾರೆ. ಹೀಗಾಗಿ, ಮೊದಲು ಅವರನ್ನೆಲ್ಲ ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತೇವೆ’ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:#MeToo :ಶ್ರುತಿ ಮಾತು ಕೇಳಿಸಿಕೊಳ್ಳಲೂ ಕಷ್ಟವೇಕೆ?
‘ಸರ್ಜಾ ಮೂರು ಸ್ಥಳಗಳಲ್ಲಿ (ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು ಆವರಣದ ಬಂಗಲೆ, ಯು.ಬಿ.ಸಿಟಿ ಹಾಗೂ ದೇವನಹಳ್ಳಿ ಸಿಗ್ನಲ್) ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದೂ ಶ್ರುತಿ ಆರೋಪಿಸಿದ್ದಾರೆ. ಭಾನುವಾರ ಸಂಜೆಯೊಳಗೆ ಆ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.
ಮದುವೆ ಸಂಗತಿಯೂ ಬಹಿರಂಗ
ಶ್ರುತಿ ಹರಿಹರನ್ ಹಾಗೂ ನೃತ್ಯ ಕಲಾವಿದ ರಾಮ್‌ಕುಮಾರ್ ಅವರು ಮದುವೆ ಆಗಿರುವ ಸಂಗತಿ ದೂರಿನ ಪ್ರತಿಯಿಂದ ಬಹಿರಂಗವಾಗಿದೆ.
ಶ್ರುತಿ ಐದು ಪುಟಗಳ ದೂರನ್ನು ಟೈಪ್ ಮಾಡಿಕೊಂಡು ಶನಿವಾರ ಠಾಣೆಗೆ ತೆರಳಿದ್ದರು. ಅದನ್ನು ನೋಡಿದ ಪೊಲೀಸರು, ಪಾಲಕರ ಜಾಗದಲ್ಲಿ ತಂದೆ ಅಥವಾ ಗಂಡನ ಹೆಸರು ಬರೆಯುವಂತೆ ಹೇಳಿದರು. ಆಗ ಅವರು ‘ಪತಿ: ರಾಮ್‌ಕುಮಾರ್’ ಎಂದು ಬರೆದುಕೊಟ್ಟಿದ್ದಾರೆ.
ಶ್ರುತಿ–ರಾಮ್‌ಕುಮಾರ್ ಪ್ರೀತಿಸುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಅವರು ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.