ADVERTISEMENT

ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ: ಅಜಯ್‌ ದೇವಗನ್‌ಗೆ ಕನ್ನಡಿಗರ ಗುದ್ದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 16:38 IST
Last Updated 27 ಏಪ್ರಿಲ್ 2022, 16:38 IST
   

ಬೆಂಗಳೂರು: ಹಿಂದಿ ರಾಷ್ಟ್ರ ಭಾಷೆ ಎಂದು ಪ್ರತಿಪಾದಿಸಿರುವ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರಿಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, 'ಹಿಂದಿ ಯಾವತ್ತೂ ಹಾಗೂ ಯಾವತ್ತಿಗೂ ನಮ್ಮ ರಾಷ್ಟ್ರ ಭಾಷೆ ಅಲ್ಲ' ಎಂದಿದ್ದಾರೆ.

ನಟ ಕಿಚ್ಚ ಸುದೀಪ್‌ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪ್ಯಾನ್‌ ಇಂಡಿಯಾ ಚಿತ್ರಗಳ ಕುರಿತು ಮಾತನಾಡುತ್ತ, 'ಹಿಂದಿಯಿಂದ ಪ್ಯಾನ್‌ ಇಂಡಿಯಾ ಸಿನಿಮಾಗಳು ಬರುತ್ತಿವೆ. ಅವರು ತೆಲುಗು, ತಮಿಳು ಭಾಷೆ ಡಬ್‌ ಮಾಡಿ ಒದ್ದಾಡುತ್ತಿದ್ದಾರೆ. ಈಗ ಹಿಂದಿ ರಾಷ್ಟ್ರಭಾಷೆ ಅಲ್ಲ,...' ಎಂದು ಹೇಳಿದ್ದರು. ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.

ಈ ಮೂಲಕ 'ಹಿಂದಿ ರಾಷ್ಟ್ರ ಭಾಷೆ' ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಅಜಯ್‌ ದೇವಗನ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, 'ಹಿಂದಿ ಹಿಂದೆಯೂ ನಮ್ಮ ರಾಷ್ಟ್ರ ಭಾಷೆ ಆಗಿರಲಿಲ್ಲ. ಮುಂದೆಯೂ ಆಗುವುದಿಲ್ಲ ನಮ್ಮ ರಾಷ್ಟ್ರ ಭಾಷೆ ಆಗುವುದೂ ಇಲ್ಲ. ನಮ್ಮ ರಾಷ್ಟ್ರದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಭವ್ಯ ಇತಿಹಾಸವಿದ್ದು, ಆ ಭಾಷೆಯ ಜನರಿಗೆ ಹೆಮ್ಮೆ ತರುವಂತಿದೆ. ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ' ಎಂದು ಹೇಳಿದ್ದಾರೆ.

ನಟ ನೀನಾಸಂ ಸತೀಶ್‌, ಹಿಂದಿ ಭಾಷೆಯ ನೆಲದಲ್ಲಿ ಕನ್ನಡ ಸಿನಿಮಾಗಳ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. 'ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ' ಎಂದು ಹಂಚಿಕೊಳ್ಳುವ ಜೊತೆಗೆ ಕಿಚ್ಚ ಸುದೀಪ್‌ ಅವರನ್ನು ಟ್ಯಾಗ್‌ ಮಾಡಿ, ನಿಮ್ಮ ಧ್ವನಿಗೆ ನಮ್ಮ ಧ್ವನಿ ಎಂದಿದ್ದಾರೆ.

ಕನ್ನಡ ಹೋರಾಟಗಾರರು ಅಜಯ್‌ ದೇವಗನ್‌ ಹೇಳಿಕೆಗೆ ಕಿಡಿಕಾರಿದ್ದು, 'ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ' ಎಂದು ಪ್ರಕಟಿಸಿದ್ದಾರೆ.

ದೇವಗನ್ ಅವರನ್ನು ಕುರಿತು 'ಪಾನ್ ಮಸಾಲಾ ಆರೋಗ್ಯಕ್ಕೆ ಒಳ್ಳೇದು ಅಲ್ಲಾ...ಹಿಂದಿ ರಾಷ್ಟ್ರಭಾಷೆಯು ಅಲ್ಲಾ...' ಎಂದು ರೂಪೇಶ್‌ ರಾಜಣ್ಣ ಎಂಬುವವರು ಟ್ವೀಟಿಸಿದ್ದಾರೆ.

ಅಜಯ್‌ ದೇವಗನ್‌ ರೀತಿಯ ದೊಡ್ಡ ಸ್ಟಾರ್‌ಗಳಿಗೇ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದು ತಿಳಿದಿಲ್ಲವಾದರೆ, ಎಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಹಬ್ಬಿಸಲಾಗಿದೆ ಎಂದು ಟ್ವೀಟಿಗರು ಪ್ರಶ್ನಿಸಿದ್ದಾರೆ.

'... ನಿಮ್ಮ ಮಾತುಗಳು ನನಗೆ ಅನುವಾದ ಆದ ಸಂದರ್ಭದಲ್ಲಿ ತಪ್ಪಾಗಿರಬಹುದು...' ಎಂದು ಅಜಯ್‌ ದೇವಗನ್‌ ಮತ್ತೊಂದು ಟ್ವೀಟ್‌ ಮಾಡಿದ್ದಾರೆ. ಆ ಟ್ವೀಟ್‌ಗೂ ಪ್ರತಿಕ್ರಿಯೆ ನೀಡಿರುವ ಸುದೀಪ್‌, 'ಸಂಪೂರ್ಣ ವಿಷಯವನ್ನು ತಿಳಿಯದೇ, ಪ್ರತಿಕ್ರಿಯೆ ನೀಡದೆ ಇರುವುದೂ ಮುಖ್ಯವಾಗುತ್ತದೆ. ನಿಮ್ಮನ್ನು ದೂಷಿಸುವುದಿಲ್ಲ. ಕ್ರಿಯಾಶೀಲ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮಿಂದ ಟ್ವೀಟ್‌ ಬಂದಿದ್ದರೆ, ನನಗೆ ಸಂತಸವಾಗುತ್ತಿತ್ತು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.