ADVERTISEMENT

‘ಝೂಟ್‌ ಮಲಾನಿ’ ಎಂದು ವ್ಯಂಗ್ಯವಾಡಿದ್ದ ಸುಬ್ಬಯ್ಯ...!

ಬಿ.ಎಸ್.ಷಣ್ಮುಖಪ್ಪ
Published 27 ಆಗಸ್ಟ್ 2019, 20:37 IST
Last Updated 27 ಆಗಸ್ಟ್ 2019, 20:37 IST
   

ಬೆಂಗಳೂರು: ಇದು 1986ರಿಂದ 1989ರ ಮಧ್ಯದ ಘಟನೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಾಮ್‌ ಜೇಠ್ಮಲಾನಿಯವರನ್ನು ಎ.ಕೆ.ಸುಬ್ಬಯ್ಯ ವಿಚಾರಣಾ ಆಯೋಗದ ಮುಂದೆ ‘ಝೂಟ್‌ ಮಲಾನಿ’ ಎನ್ನುವ ಮೂಲಕ ತಾವೆಷ್ಟು ಹಿಮ್ಮತ್‌ವಾಲಾ ಎಂಬುದನ್ನು ತೋರಿಸಿಕೊಟ್ಟಿದ್ದರು.

ಈ ಪ್ರಕರಣದಲ್ಲಿ ಫಿರ್ಯಾದುದಾರರ ಪರ ವಕಾಲತ್ತು ವಹಿಸಿದ್ದ ಪ್ರೊ.ರವಿವರ್ಮಕುಮಾರ್ ಪ್ರಸಂಗವನ್ನು ಸ್ಮರಿಸಿಕೊಳ್ಳುವುದು ಹೀಗೆ...

ವಿರಾಜಪೇಟೆಯ ಕಾಫಿ ಪ್ಲಾಂಟರ್‌ ಸಿ.ಪಿ.ಭರತನ್‌, ‘ನನ್ನ ಪುತ್ರಿ ಸುಧಾಗೆ ವೈದ್ಯಕೀಯ ಪದವಿ ಸೀಟು ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಪುತ್ರ ಭರತ್‌ ಹೆಗಡೆ ನನ್ನಿಂದ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ. ಆದರೆ, ಕೊಟ್ಟ ಮಾತಿನಿಂತೆ ಸೀಟು ಕೊಡಿಸಿಲ್ಲ ಹಾಗೂ ಹಣ ವಾಪಸು ಕೇಳಿದರೆ ₹ 50 ಸಾವಿರ ಮಾತ್ರ ಕೊಟ್ಟಿದ್ದಾರೆ’ ಎಂದು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ADVERTISEMENT

ಏತನ್ಮಧ್ಯೆ ರಾಮಕೃಷ್ಣ ಹೆಗಡೆ ಪ್ರಕರಣದ ವಿಚಾರಣೆಗಾಗಿ, ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎಸ್‌.ಪುಟ್ಟಸ್ವಾಮಿ ಆಯೋಗ ರಚನೆ ಮಾಡಿದ್ದರು. ಭರತ್‌ ಹೆಗಡೆ ಪರವಾಗಿ ಜೇಠ್ಮಲಾನಿ ಹಾಜರಾಗುತ್ತಿದ್ದರು. ಈ ಪ್ರಕರಣ ಬಯಲಿಗೆ ತಂದಿದ್ದ ಎ.ಕೆ.ಸುಬ್ಬಯ್ಯ, ಮಧ್ಯಂತರ ಸೇರ್ಪಡೆ ಅರ್ಜಿ ಸಲ್ಲಿಸಿ ವಾದ ಮಂಡಿಸುತ್ತಿದ್ದರು.

ಅದೊಂದು ದಿನ ವಿಚಾರಣೆ ವೇಳೆ ಜೇಠ್ಮಲಾನಿ, ‘ಸುಬ್ಬಯ್ಯ ಅವರನ್ನು ಸಬ್ಬಯ್ಯ’ ಎಂದು ಸಂಬೋಧಿಸಿದರು. ಆ ಕ್ಷಣವೇ ಸುಬ್ಬಯ್ಯ ಇದನ್ನು ಪ್ರತಿಭಟಿಸಿ ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿದರೂ ಜೇಠ್ಮಲಾನಿ ಪುನಃ ಸಬ್ಬಯ್ಯ ಎಂದೇ ಹೇಳಿದರು. ಇದರಿಂದ ಕುಪಿತಗೊಂಡ ಸುಬ್ಬಯ್ಯ, ‘ನನ್ನ ಹೆಸರು ಹೇಗೆ ಉಚ್ಚರಿಸಬೇಕು ಎಂದು ನಿಮಗೆ ಚೆನ್ನಾಗಿಯೇ ಗೊತ್ತಿದೆ. ಆದರೂ ನೀವು ಬೇಕಂತಲೇ ಸಬ್ಬಯ್ಯ ಎನ್ನುತ್ತಿದ್ದೀರಿ. ನೀವು ಇದೇ ರೀತಿ ಕರೆಯುವುದಾದರೆ ನಾನು ನಿಮ್ಮನ್ನು ಝೂಟ್‌ ಮಲಾನಿ ಎನ್ನುತ್ತೇನೆ’ ಎಂದು ಬಿಸಿ ಮುಟ್ಟಿಸಿದ್ದರು. ಬಳಿಕ ಜೇಠ್ಮಲಾನಿ ಸುಬ್ಬಯ್ಯ ಎಂದು ಸರಾಗವಾಗಿ ಉಚ್ಚರಿಸಿದ್ದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.