ಬೆಂಗಳೂರು: ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಅಕೇಷಿಯಾ, ನೀಲಗಿರಿ ಮರ ಬೆಳೆಯದಂತೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಜೆಡಿಎಸ್‌ನ ಎಸ್.ಎಲ್. ಬೋಜೇಗೌಡ ಆಗ್ರಹಿಸಿದರು.
ವಿಧಾನ ಪರಿಷತ್‌ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದ ಅವರು,‘ಅಕೇಷಿಯಾ, ನೀಲಗಿರಿ ತೆರವುಗೊಳಿಸುವಂತೆ 2017ರಲ್ಲಿಯೇ ಸರ್ಕಾರ ಆದೇಶ ಮಾಡಿದೆ. ಆದರೆ, ಒಂದೇ ಒಂದು ಮರ ತೆರವುಗೊಳಿಸಿಲ್ಲ’ ಎಂದರು.
‘ದಟ್ಟ ಕಾಡುಗಳಲ್ಲಿಯೂ ಹಣ್ಣಿನ ಮರಗಳು ಇಲ್ಲ. ಹೀಗಾಗಿ, ಮಂಗಗಳು ಸೇರಿದಂತೆ ಪ್ರಾಣಿಗಳು ಆಹಾರಕ್ಕಾಗಿ ಕಾಡುಗಳಿಂದ ಹೊರಬರುತ್ತಿವೆ. ವರ್ಷಕ್ಕೆ 10 ಲಕ್ಷ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅರಣ್ಯ ಇಲಾಖೆ, ಬಳಿಕ ಅವುಗಳ ನಿರ್ವಹಣೆಗೆ ಮುಂದಾಗುತ್ತಿಲ್ಲ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
2020–21ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿ, ಇನ್ನೂ ಅನುಷ್ಠಾನಗೊಳ್ಳದ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, ‘ಸರ್ಕಾರ ಆ ಯೋಜನೆಗಳ ಅನುಷ್ಠಾನಕ್ಕೆ ಮೊದಲು ಆದ್ಯತೆ ನೀಡಬೇಕು. ಅಲ್ಲದೆ, ಪ‍್ರಸಕ್ತ ಸಾಲಿನಲ್ಲಿ ಘೋಷಿಸಿದ ಹಲವು ಯೋಜನೆಗಳಿಗೆ ಅನುದಾನ ಕಡಿಮೆ ಹಂಚಿಕೆ ಮಾಡಲಾಗಿದೆ. ಆ ಬಗ್ಗೆಯೂ ಗಮನಹರಿಸಬೇಕು. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದಿರುವುದರಿಂದ ಗೋಶಾಲೆಗಳ ಸಂಖ್ಯೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.