ADVERTISEMENT

ಮಂಡ್ಯ ನುಡಿಜಾತ್ರೆಗೆ ‘ಗೀತಗಾಯನ’ ಆಯೋಜನೆ: ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 13:20 IST
Last Updated 13 ನವೆಂಬರ್ 2024, 13:20 IST
<div class="paragraphs"><p>ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಮಹೇಶ ಜೋಶಿ ಮಾತನಾಡಿದರು</p></div>

ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ. ಮಹೇಶ ಜೋಶಿ ಮಾತನಾಡಿದರು

   

ಪ್ರಜಾವಾಣಿ ವಾರ್ತೆ

ಮಂಡ್ಯ: ನಗರದಲ್ಲಿ ಡಿ. 20, 21, 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಶೀರ್ಷಿಕೆಯಡಿ ನಾಡು–ನುಡಿಗೆ ಸಂಬಂಧಿಸಿದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

ADVERTISEMENT

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನ.24ರಂದು ಬೆಳಿಗ್ಗೆ 9ಕ್ಕೆ ಮಂಡ್ಯದ ಅಂಬೇಡ್ಕರ್‌ ಭವನದಲ್ಲಿ ನುರಿತ ಸಂಗೀತಗಾರರ ಸಮ್ಮುಖದಲ್ಲಿ ಗಾಯಕರನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಗಾಯಕರು ಡಿ.1ರಂದು ಪ್ರದರ್ಶನ ನೀಡಲಿದ್ದು, ಚಿತ್ರೀಕರಣ ಮಾಡಿಕೊಳ್ಳಲಾಗುವುದು. ನಂತರ ಚಂದನ ಟಿ.ವಿ.ಯಲ್ಲಿ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮದ ಬದಲಿಗೆ ಈ ನೂತನ ಗೀತಗಾಯನವನ್ನು ಪ್ರಸಾರ ಮಾಡಲಾಗುವುದು ಎಂದು ಹೇಳಿದರು. 

ವಿಶ್ವೇಶ್ವರಯ್ಯ ಸಂಬಂಧಿಕರ ಬೇಸರ

ವಿದೇಶದಲ್ಲಿರುವ ಕನ್ನಡಿಗರಿಗೆ ಆಹ್ವಾನ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸೂಚನೆ ನೀಡಿದ ಮೇರೆಗೆ, ‘ಅಮೆರಿಕದಲ್ಲಿ ನೆಲೆಸಿರುವ ಸರ್‌ ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳು ಸೇರಿದಂತೆ ಹಲವರನ್ನು ಆಹ್ವಾನಿಸಿದ್ದೇವೆ. ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಗೆ ಅಮೂಲ್ಯ ಕೊಡುಗೆ ನೀಡಿರುವ ವಿಶ್ವೇಶ್ವರಯ್ಯನವರ ಸಂಬಂಧಿಕರನ್ನು ಆಹ್ವಾನಿಸಿ, ಗೌರವಿಸುವುದು ನಮ್ಮ ಕರ್ತವ್ಯವಲ್ಲವೇ? ಎಂದರು. ಸಾಮಾಜಿಕ ಜಾಲತಾಣದಲ್ಲಿ ಉಂಟಾದ ಚರ್ಚೆಯಿಂದ ವಿಶ್ವೇಶ್ವರಯ್ಯನವರ ಸಂಬಂಧಿಕರು ಬೇಸರ ವ್ಯಕ್ತಪಡಿಸಿ ಪರಿಷತ್ತಿಗೆ ಪತ್ರ ಬರೆದಿದ್ದಾರೆ ಎಂದರು. 

ಒಂದು ದಿನದ ವೇತನ

ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು (ಸುಮಾರು ₹5 ಕೋಟಿ) ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನೀಡಲು ಒಪ್ಪಿಗೆ ನೀಡಿದ್ದಾರೆ. ಅವರಿಗೆ ಪರಿಷತ್ತಿನ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಹೇಶ ಜೋಶಿ ತಿಳಿಸಿದರು. 

‘ಚುನಾವಣೆಯಿಂದ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಳಂಬ’ 

‘ಸಮ್ಮೇಳನಾಧ್ಯಕ್ಷರ ಆಯ್ಕೆಯಾಗಿ ಅ.10ರಂದು ನಡೆಯಬೇಕಿದ್ದ ಕಾರ್ಯಕಾರಿ ಸಮಿತಿ ಸಭೆಯನ್ನು ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಅನುಮತಿ ಪಡೆದ ನಂತರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು. 

ಅನುದಾನ ಬಿಡುಗಡೆಯಾಗದ ಬಗ್ಗೆ ಕೇಳಿದ ಪ್ರಶ್ನೆಗೆ, ಬೇರೆ ಜಿಲ್ಲೆಗಳಲ್ಲೂ ಸಮ್ಮೇಳನಕ್ಕೆ ಅನುದಾನ ತಡವಾಗಿಯೇ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಮಂಡ್ಯದ ಸಮ್ಮೇಳನಕ್ಕೆ ₹25 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿದೆ. ಹಣಕಾಸು ಇಲಾಖೆಯಿಂದ ಜಿಲ್ಲಾಧಿಕಾರಿ ಖಾತೆಗೆ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದರು. 

‘ಜಾಗದ ವಿವಾದ: ಮಂಡ್ಯದ ಗೌರವಕ್ಕೆ ಧಕ್ಕೆ’

ಸಮ್ಮೇಳನಕ್ಕೆ 37 ದಿನ ಬಾಕಿ ಇರುವ ಸಂದರ್ಭದಲ್ಲಿ ಕೆಲವರು ‘ಜಾಗದ ಬಗ್ಗೆ’ ಗೊಂದಲ ಸೃಷ್ಟಿಸುತ್ತಿರುವುದು ತೀವ್ರ ಬೇಸರವಾಗಿದೆ. ಅನಗತ್ಯ ವಿವಾದದಿಂದ ಮಂಡ್ಯ ಜಿಲ್ಲೆಯ ಗೌರವಕ್ಕೆ ಧಕ್ಕೆ ಬರುತ್ತದೆ. ಏನಾದರೂ ಗೊಂದಲಗಳಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ಬಳಿ ಕೇಳಿ ಮಾಹಿತಿ ಪಡೆಯಲಿ. ಮಾಧ್ಯಮದವರ ಮುಂದೆ ಹೋಗಿ ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ ಎಂದರು. 

‘ಜಾಗದ ವಿವಾದಕ್ಕೆ ಮಹೇಶ ಜೋಶಿಯವರೇ ಕಾರಣ ಎನ್ನಲಾಗುತ್ತಿದೆ’ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಈಗಾಗಲೇ 28 ಉಪಸಮಿತಿಗಳನ್ನು ರಚಿಸಿ, ನಿರ್ದಿಷ್ಟ ಜವಾಬ್ದಾರಿ ಮತ್ತು ಕಾರ್ಯಗಳನ್ನು ಹಂಚಿಕೆ ಮಾಡಲಾಗಿದೆ. ಗೋಷ್ಠಿಗಳಲ್ಲಿ ವಿಷಯಗಳ ಆಯ್ಕೆ, ಅತಿಥಿಗಳ ಆಯ್ಕೆ ಸೇರಿದಂತೆ ಸಾಹಿತ್ಯಿಕ ಚಟುವಟಿಕೆಯನ್ನು ಪರಿಷತ್ತು ನೋಡಿಕೊಳ್ಳುತ್ತದೆ. ಸಮ್ಮೇಳನಕ್ಕೆ ಸಕಲ ಸೌಲಭ್ಯ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಜಾಗ ಆಯ್ಕೆ ಮಾಡುವುದು, ವೇದಿಕೆ ನಿರ್ಮಿಸುವುದು ಪರಿಷತ್ತಿನ ಅಧ್ಯಕ್ಷರ ಕೆಲಸವಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.