ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಲ್ಲೂ ಕರ್ನಾಟಕ ನಾಮಕರಣದ 50ನೇ ವರ್ಷದ ಸುವರ್ಣ ಸಂಭ್ರಮ ಲಾಂಛನ ಬಳಸಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ಇದೇ ಡಿಸೆಂಬರ್‌ನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಕುರಿತು ಗುರುವಾರ ನಡೆದದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಸಮ್ಮೇಳನದ ಕುರಿತು ನಡೆಸುವ ಎಲ್ಲ ಪತ್ರ ವ್ಯವಹಾರಗಳಲ್ಲಿ ಹಾಗೂ ಆಯೋಜಿಸಲಾಗುವ ಎಲ್ಲ ಕಾರ್ಯಕ್ರಮಗಳಲ್ಲಿ ಈ ಲಾಂಛನವನ್ನು ಕಡ್ಡಾಯವಾಗಿ ಬಳಸಿ’ ಎಂದರು.
ಸಮ್ಮೇಳನಕ್ಕೆ ₹30 ಕೋಟಿ ಅನುದಾನದ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೋರಿದ್ದಾರೆ. ಕಾರ್ಯಕ್ರಮಗಳ ಸಂಪೂರ್ಣ ಕ್ರಿಯಾಯೋಜನೆಯನ್ನು ಸಲ್ಲಿಸಲು ಸೂಚಿಸಲಾಗಿದೆ ಎಂದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ‘ಸಮ್ಮೇಳನ ಆಯೋಜನೆಗೆ ಎರಡು ಸ್ಥಳಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ ಯಾವುದು ಸೂಕ್ತ ಎಂಬುದನ್ನು ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾಡಳಿತ ನಿರ್ಧರಿಸಲಿವೆ. ಸ್ಥಳ ನಿಗದಿಯಾದರೆ, ಅಗತ್ಯ ಅನುಕೂಲಗಳನ್ನು ಕಲ್ಪಿಸುವ ಕೆಲಸ ಆರಂಭಿಸಬಹುದು’ ಎಂದರು.
ಶಾಸಕರಾದ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ, ದಿನೇಶ್ ಗೂಳಿಗೌಡ, ಉದಯ ಕೆ.ಎಂ, ಪಿ.ಎಂ. ನರೇಂದ್ರಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ, ಮಂಡ್ಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.