ADVERTISEMENT

ಜಾತಿಗಣತಿ; ಲಿಂಗಾಯತರ ವಿರೋಧ, ಸಿಎಂಗೆ ಮನವಿ

ಸಚಿವ ಎಂ.ಬಿ. ಪಾಟೀಲ, ಖಂಡ್ರೆ, ಶಿವಾನಂದ ಪಾಟೀಲ, ಶರಣ ಪ್ರಕಾಶ್ ಸಹಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 0:30 IST
Last Updated 16 ಡಿಸೆಂಬರ್ 2023, 0:30 IST
ಅಖಿಲಭಾರತ ಲಿಂಗಾಯತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ ಇದ್ದರು
ಅಖಿಲಭಾರತ ಲಿಂಗಾಯತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಚಿವರಾದ ಶಿವಾನಂದ ಪಾಟೀಲ, ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ ಇದ್ದರು   

ಬೆಳಗಾವಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಅಂಗೀಕರಿಸದೆ, ವೈಜ್ಞಾನಿಕವಾಗಿ ಮತ್ತು ವಾಸ್ತಾಂಶ ಆಧಾರಿತವಾಗಿ ಹೊಸದಾಗಿ ಜಾತಿ ಗಣತಿ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾ ಮನವಿ ಸಲ್ಲಿಸಿದೆ.

ಮಹಾಸಭಾದ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಸಚಿವರು, ಶಾಸಕರ ನಿಯೋಗ ಸಿದ್ದರಾಮಯ್ಯ ಅವರನ್ನು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಿಯೋಗದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ, ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ ಇದ್ದರು. ಗುರುವಾರ ನಡೆದ ಸಮಾಜ ಎಲ್ಲ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದೂ ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

ಮನವಿಗೆ ಶಾಸಕರಾದ ಎಂ.ವೈ. ಪಾಟೀಲ, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಸಹಿ ಹಾಕಿದ್ದಾರೆ. 

‘ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದೇ ವೀರಶೈವ ಮಹಾಸಭಾ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುವವರಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವುದು ನಮ್ಮ ತತ್ವ. ಅದೇ ನಮ್ಮ ಬದ್ಧತೆ. ಆದರೆ, ರಾಜ್ಯದಲ್ಲಿ ಈಗಾಗಲೇ ನಡೆದಿರುವ ಸಾಮಾಜಿಕ, ಆರ್ಥಿಕ (ಜಾತಿ ಗಣತಿ) ಸಮೀಕ್ಷೆ ಅಸಮರ್ಪಕವಾಗಿದೆ. ಇದನ್ನು ಅಂಗೀಕರಿಸಿದರೆ ನಮ್ಮ ಸಮಾಜಕ್ಕೆ ಅಷ್ಟೇ ಅಲ್ಲದೆ, ಸಮಾಜದ ವಂಚಿತರು, ಶೋಷಿತರು, ಮಧ್ಯಮ ವರ್ಗದ ಆರ್ಥಿಕ ದುರ್ಬಲರಿಗೆ ಘೋರ ಅನ್ಯಾಯ ಆಗಲಿದೆ’ ಎಂದೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ನಾವು ಜಾತಿ ಗಣತಿ ವಿರೋಧಿಗಳಲ್ಲ. ಆದರೆ ಎಂಟು ವರ್ಷಗಳ ಹಿಂದೆ ನಡೆಸಲಾದ ಸಾಮಾಜಿಕ– ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಮತ್ತು ಲೋಪಗಳಿಂದ ಕೂಡಿದೆ. ಅದನ್ನು ಸರಿಪಡಿಸುವ ಅಗತ್ಯವಿದೆ.  ಹೀಗಾಗಿ, ಹೊಸತಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು’ ಎಂದು ಆಗ್ರಹಿಸಲಾಗಿದೆ 

‘ಅಧಿಕಾರಿಗಳು ಎಲ್ಲರ ಮನೆಗೂ ಭೇಟಿ ನೀಡಿಲ್ಲ ಬಂದಿಲ್ಲ. ಕಚೇರಿಯಲ್ಲಿಯೇ ಕುಳಿತು ಈ ಸಮೀಕ್ಷಾ ವರದಿ ಸಿದ್ಧಪಡಿಸಿದ್ದಾರೆ. ಸಮೀಕ್ಷೆ ನಡೆದಾಗ ವೀರಶೈವ ಲಿಂಗಾಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸಲಾತಿಯಲ್ಲಿ ಅನ್ಯಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥವಾ ಲಿಂಗಾಯತ ಎಂದು ಬರೆಸದೆ ತಮ್ಮ ಒಳಪಂಗಡಗಳನ್ನು ನಮೂದಿಸಿದ್ದಾರೆ. ಅಂತೆಯೇ ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ನಿಜವಾಗಿ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಅಥವಾ ಪರಾಮರ್ಶೆ ಆಗಿಲ್ಲ. ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎನ್ನುವುದು ಮಹಾಸಭಾದ ಅಭಿಪ್ರಾಯ’ ಎಂದು ತಿಳಿಸಲಾಗಿದೆ. 

‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಸೇರಿಸಿ ಸಂಪೂರ್ಣ ವೈಜ್ಞಾನಿಕವಾಗಿ ಹೊಸತಾಗಿ ಜಾತಿಗಣತಿ ನಡೆಸಿ, ವಾಸ್ತವಾಂಶ ಆಧರಿಸಿ ಅಂಕಿ–ಅಂಶಗಳನ್ನು ದಾಖಲಿಸಿದರೆ ಅರ್ಹರಿಗೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ’ ಎಂದೂ ಮನವಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.