ಸಾಗರ: ಅತ್ಯಾಚಾರದ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳಿಗೆ ಅಖಿಲ ಹವ್ಯಕ ಮಹಾಸಭಾವು ಡಿ.28ರಿಂದ ಆಯೋಜಿಸಿರುವ ಅಮೃತ ಮಹೋತ್ಸವ ಹಾಗೂ ವಿಶ್ವ ಹವ್ಯಕ ಸಮ್ಮೇಳನದಲ್ಲಿ ವೇದಿಕೆ ಕಲ್ಪಿಸಬಾರದು ಎಂದು ಅಖಿಲ ಹವ್ಯಕ ಒಕ್ಕೂಟದ ನಿರ್ದೇಶಕ ಅಶೋಕ್ ಜಿ.ಭಟ್ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತ್ಯಾಚಾರ, ಅನಾಚಾರದ ಆರೋಪ ಎದುರಿಸುತ್ತಿರುವವರು ಶಂಕರಪೀಠದಲ್ಲಿ ಇರಲು ಅರ್ಹರಲ್ಲ ಎಂದು ಸನಾತನ ಸಂವರ್ಧಿನಿ ಸಭಾ ಈ ಹಿಂದೆ ತೆಗೆದುಕೊಂಡಿದ್ದ ನಿರ್ಣಯವನ್ನು ಹವ್ಯಕ ಮಹಾಸಭಾ ಖಂಡಿಸಿದೆ. ಈ ಖಂಡನಾ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದರೂ ಮಹಾಸಭಾ ಆ ಬಗ್ಗೆ ಪ್ರತಿಕ್ರಿಯೆ ನೀಡದಿರುವುದು ಖಂಡನೀಯ’ ಎಂದರು.
ಸನ್ಯಾಸಾಶ್ರಮಕ್ಕೆ ವಿಹಿತವಲ್ಲದ ಜೀವನಶೈಲಿಯನ್ನು ಅನುಸರಿಸುತ್ತಿರುವ ರಾಘವೇಶ್ವರ ಶ್ರೀಗಳು ಹವ್ಯಕ ಸಮ್ಮೇಳನದಲ್ಲಿ ಪಾಲ್ಗೊಳ್ಳಬಾರದು ಎಂಬುದು ಒಕ್ಕೂಟದ ನಿಲುವು ಆಗಿದೆ. ಆದರೆ ಹವ್ಯಕ ಮಹಾಸಭಾವು ಮೂರು ದಿನಗಳ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಘವೇಶ್ವರ ಶ್ರೀಗಳ ನಿರ್ದೇಶನದಂತೆ ಆಯೋಜಿಸಿದ್ದು, ಸಮ್ಮೇಳನ ರಾಮಚಂದ್ರಾಪುರ ಮಠದ ಕಾರ್ಯಕ್ರಮ ಎನ್ನುವಂತೆ ಭಾಸವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.