ADVERTISEMENT

ನೆರವಿಗೆ ಬನ್ನಿ: ಅಮೆರಿಕ ಕನ್ನಡಿಗರಿಗೆ ಸಿ.ಎಂ‌ ಮನವಿ

10ನೇ ಅಕ್ಕ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST

ಬೆಂಗಳೂರು: ‘ಮಹಾಪ್ರವಾಹದಿಂದ ಸಂಕಷ್ಟಕ್ಕೆ ಈಡಾಗಿರುವ ಕೊಡಗಿನವರ ಬದುಕು ಕಟ್ಟಿಕೊಡಲು ಉದಾರ ಸಹಾಯ ನೀಡಿ’ ಎಂದು ಅಮೆರಿಕದಲ್ಲಿರುವ ಕನ್ನಡಿಗರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಅಮೆರಿಕದ ಡಲ್ಲಾಸ್ ನಗರದಲ್ಲಿ ನಡೆಯುತ್ತಿರುವ ಅಮೆರಿಕ ಕನ್ನಡ ಕೂಟಗಳ ಆಗರದ (ಅಕ್ಕ) 10 ನೇ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಅವರ ಲಿಖಿತ ಭಾಷಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ಓದಿದರು. ಕನ್ನಡ ನಾಡಿನ ನೆರವಿಗೆ ಧಾವಿಸುವಂತೆ ಮುಖ್ಯಮಂತ್ರಿ ಲಿಖಿತ ಭಾಷಣದಲ್ಲಿ ಕೋರಿದ್ದಾರೆ.

‘ಕನ್ನಡ ನಾಡಿನಲ್ಲಿ ಕಲಿತ ನೀವು ವಿವಿಧ ರಂಗಗಳಲ್ಲಿ ಮಹೋನ್ನತ ಸಾಧನೆ ಮಾಡಿದ್ದೀರಿ. ನಿಮ್ಮ ಕನ್ನಡ ನಾಡಿಗೂ ಅದರ ಋಣ ಸಂದಾಯ ಮಾಡಬೇಕು ಎಂಬುದು ಕಳಕಳಿಯ ಮನವಿ. ನಮ್ಮೂರಿನ ಮಕ್ಕಳ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ. ಅಮೆರಿಕದ ಶಾಲೆಗಳಲ್ಲಿರುವ ಸೌಲಭ್ಯಗಳು ನಮ್ಮೂರಿನ ಕುಗ್ರಾಮಗಳ ಮಕ್ಕಳಿಗೂ ಸಿಗುವಂತಾಗಲಿ. ಅವರಿಗೆ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿ’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ರೈತರ ಏಳಿಗೆ ನನ್ನ ಹೆಬ್ಬಯಕೆ. ಮಕ್ಕಳು - ಮಹಿಳೆಯರ ಸಬಲೀಕರಣ ಮತ್ತು ಯುವ ಸಮುದಾಯಕ್ಕೆ ಉದ್ಯೋಗ; ಇವು ನನ್ನ ಇನ್ನೆರಡು ಕನಸು. ಇವುಗಳನ್ನು ಈಡೇರಿಸಲು ನಿಮ್ಮಲ್ಲಿರುವ ಕಲ್ಪನೆ, ಸಲಹೆ – ಸೂಚನೆಗಳನ್ನು ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ನಾನು, ಸದಾ ನಿಮಗೆ ತೆರೆದಿರುತ್ತೇನೆ. ಹಾಗೆಯೇ ವಿವಿಧ ರಂಗಗಳಲ್ಲಿ ನಿಮ್ಮ ಸಾಧನೆಗಳು ನಮ್ಮವರಿಗೂ ನೆರವಾಗಲಿ’ ಎಂದು ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.