ADVERTISEMENT

ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಆಸೆ ತೋರಿಸಿ ಉದ್ಯಮಿಗೆ ಮೋಸ: ಆರೋಪಿ ಬಂಧನ

ಅಕ್ಷಯ ತೃತೀಯ: ಕಾಸಿನ ಕಿಮ್ಮತ್ತಿಗೆ ಚಿನ್ನ ಮಾರಾಟದ ಆಮಿಷ

​ಪ್ರಜಾವಾಣಿ ವಾರ್ತೆ
Published 7 ಮೇ 2019, 19:58 IST
Last Updated 7 ಮೇ 2019, 19:58 IST

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ಅಕ್ಷಯ ತೃತೀಯ ದಿನದಂದು ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಆಸೆಯಿಂದ ಬೆಂಗಳೂರಿನಿಂದ ಬಂದಿದ್ದ ಹೋಟೆಲ್‌ ಉದ್ಯಮಿಯೊಬ್ಬರಿಗೆ ಮೂವರು ಆರೋಪಿಗಳು ನಕಲಿ ಚಿನ್ನ ಕೊಟ್ಟು ವಂಚಿಸಿದ್ದು, ಈ ಪೈಕಿ ಒಬ್ಬನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಚಂದ್ರಶೇಖರ ಪೂಜಾರ್‌ ವಂಚನೆಗೆ ಒಳಗಾದವರು. ಹರಪನಹಳ್ಳಿ ತಾಲ್ಲೂಕಿನ ಯಲ್ಲಾಪುರದ ಕುಮಾರ್ ಉರುಫ್‌ ಲಕ್ಕಪ್ಪ, ಅಶೋಕ ಮತ್ತು ಬಿಕ್ಕಿಕಟ್ಟಿಯ ರವಿ ಎಂಬುವರು ವಂಚಿಸಿದ್ದು, ಲಕ್ಕಪ್ಪ ಸಿಕ್ಕಿಬಿದ್ದಿದ್ದಾನೆ.

ಈ ಆರೋಪಿಗಳು, ಕಡಿಮೆ ಬೆಲೆಗೆ ಅಸಲಿ ಚಿನ್ನ ಕೊಟ್ಟು ವಿಶ್ವಾಸ ಬರುವ ಹಾಗೆ ಮೊದಲು ನಡೆದುಕೊಂಡಿದ್ದಾರೆ. ಬಳಿಕ ಮನೆಯ ಪಾಯ ತೆಗೆಯುವಾಗ ಚಿನ್ನ ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಉದ್ಯಮಿ, ಅಕ್ಷಯ ತೃತೀಯ ದಿನ ಅರ್ಧ ಕಿಲೋ ಖರೀದಿಸಲು ಒಪ್ಪಿ ನಗದು ಸಮೇತ ಇಲ್ಲಿಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪಟ್ಟಣದ ಓಂ ಸರ್ಕಲ್‌ನಲ್ಲಿ ಮಂಗಳವಾರ ಬೆಳಿಗ್ಗೆ ಆರೋಪಿಗಳು ಉದ್ಯಮಿಗೆ 500 ಗ್ರಾಂ ಚಿನ್ನ ಇರುವ ಚೀಲ ಕೊಟ್ಟು, ನಗದು ಪಡೆದಿದ್ದಾರೆ. ತಕ್ಷಣ ಅಲ್ಲಿಂದ ಓಡಿದ್ದಾರೆ. ಅನುಮಾನಗೊಂಡ ಉದ್ಯಮಿ, ಚೀಲ ತೆರೆದು ನೋಡಿದಾಗ ನಕಲಿ ಚಿನ್ನ ಎಂಬುದು ಗೊತ್ತಾಗಿದೆ. ತಕ್ಷಣ ಪಟ್ಟಣ ಪೊಲೀಸರ ನೆರವು ಪಡೆದು ಆರೋಪಿಗಳನ್ನು ಬೆನ್ನಟ್ಟಿದರು.

ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ. ಬಂಧಿತನಿಂದ ₹99,500 ನಗದು ಹಾಗೂ 500 ಗ್ರಾಂ ನಕಲಿ ಚಿನ್ನ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.