ಬೆಂಗಳೂರು: ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ನಡುವಿನ ಸಮನ್ವಯತೆ ಕೊರತೆಯಿಂದ ವಸತಿಹೀನ ಅಲೆಮಾರಿ, ಅರೆ ಅಲೆಮಾರಿ ಮತ್ತು ಸೂಕ್ಷ್ಮ ಸಮುದಾಯಗಳ 14 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಸತಿ ಯೋಜನೆಯಿಂದ ವಂಚಿತವಾಗಿವೆ.
ಸ್ವಂತ ವಿಳಾಸ, ಆಧಾರ್ ಕಾರ್ಡ್, ಪಡಿತರ ಚೀಟಿಯೇ ಇಲ್ಲದೆ ಬೀದಿಬೀದಿ ಅಲೆಯುವ ಸಮುದಾಯಗಳ ಸ್ವಂತ ಸೂರಿನ ಕನಸು ನುಚ್ಚು ನೂರಾಗಿದೆ ಎಂಬುದು ಅಲೆಮಾರಿ ಸಮುದಾಯಗಳ ಅಳಲು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಸಮುದಾಯಗಳ ದೌರ್ಜನ್ಯ ಸಂತ್ರಸ್ತರು, ಮಾಜಿ ದೇವದಾಸಿಯರು, ಅಂತರ್ಜಾತಿ ವಿವಾಹಿತ ದಂಪತಿಗಳು, ಒಂಟಿ ಮಹಿಳೆಯರು, ಮೀನುಗಾರರಿಗೆ ವಿಶೇಷವಾಗಿ ವಸತಿ ಯೋಜನೆ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು.
ಅಂಬೇಡ್ಕರ್ ವಸತಿ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ನೀಡುವ ಮನೆಗಳನ್ನು ಈ ಅತಿಸೂಕ್ಷ್ಮ ಸಮುದಾಯಗಳು ಪಡೆಯಲು ಸಾಧ್ಯವಿಲ್ಲದ ಕಾರಣ ಪ್ರತ್ಯೇಕವಾಗಿ ಮನೆ ನಿರ್ಮಿಸಿಕೊಡಬೇಕು ಎಂಬುದು ಅಲೆಮಾರಿ ಸಮುದಾಯಗಳ ಹೋರಾಟಗಾರರ ಒತ್ತಾಯವಾಗಿತ್ತು. ಇದಕ್ಕೆ ಒಪ್ಪಿದ್ದ ಸರ್ಕಾರ, ವಸತಿ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಅನುದಾನ ನಿಗದಿ ಮಾಡಿತ್ತು.
ಪರಿಶಿಷ್ಟ ಜಾತಿಗಳ ಉಪಯೋಜನೆ(ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ(ಟಿಎಸ್‌ಪಿ) ಬಜೆಟ್‌ನಲ್ಲೂ ಈ ಯೋಜನೆಗೆ ಅನುಮೋದನೆ ದೊರೆತಿತ್ತು.
ಒಟ್ಟಾರೆ ₹250 ಕೋಟಿಯನ್ನು ಸರ್ಕಾರ ನಿಗದಿ ಮಾಡಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಗೂ ಅನುದಾನ ವರ್ಗಾವಣೆಯಾಗಿತ್ತು.
ಪ್ರತಿ ಮನೆ ನಿರ್ಮಾಣ ಘಟಕ ವೆಚ್ಚವನ್ನು ಗ್ರಾಮೀಣ ಪ್ರದೇಶಕ್ಕೆ ₹1.75 ಲಕ್ಷ ಮತ್ತು ನಗರ ಪ್ರದೇಶಕ್ಕೆ ₹2 ಲಕ್ಷ ನಿಗದಿ ಮಾಡಲಾಗಿತ್ತು. ಈ ಅನುದಾನ ಬಳಕೆ ಮಾಡಿಕೊಂಡು ಕನಿಷ್ಠ 14 ಸಾವಿರ ಕುಟುಂಬಗಳಿಗೆ ಸೂರು ಕಲ್ಪಿಸಿಕೊಡಲು ಅವಕಾಶ ಇತ್ತು. ಸಮಾಜ ಕಲ್ಯಾಣ ಇಲಾಖೆ, ವಸತಿ ಇಲಾಖೆ ಅಧಿಕಾರಿಗಳು ಮತ್ತು ಈ ಎರಡೂ ಇಲಾಖೆಗಳ ಅಡಿಯಲ್ಲಿರುವ ನಿಗಮಗಳ, ಅಲೆಮಾರಿ ಅಭಿವೃದ್ಧಿ ಕೋಶದ ಅಧಿಕಾರಿಗಳ ನಡುವೆ ಹಲವು ಸುತ್ತಿನ ಸಭೆಗಳು ನಡೆದು 2021ರ ಸೆಪ್ಟೆಂಬರ್‌ನಲ್ಲಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅನುದಾನವನ್ನೂ ವರ್ಗಾವಣೆ ಮಾಡಲಾಗಿತ್ತು.
ಜ.21ರಂದು ಹಣಕಾಸು ಇಲಾಖೆ ಅಧಿಕೃತ ಟಿಪ್ಪಣಿಯೊಂದನ್ನು ಹೊರಡಿಸಿದ್ದು, ಬಿಡುಗಡೆ ಮಾಡಿರುವ ₹250 ಕೋಟಿ ಅನುದಾನವನ್ನು ಅಂಬೇಡ್ಕರ್ ವಸತಿ ಯೋಜನೆಯಡಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳ ಬಾಕಿ ಕಂತುಗಳಿಗೆ ಬಳಸಿಕೊಳ್ಳಲು ಸೂಚನೆ ನೀಡಿದೆ. ಈ ಸಮುದಾಯಗಳಿಗೆ ಪ್ರತ್ಯೇಕ ಯೋಜನೆಗಳ ಬದಲು ಹೊಸದಾಗಿ ಘೋಷಣೆ ಮಾಡಿರುವ 5 ಲಕ್ಷ ಮನೆಗಳ ಗುರಿಯಲ್ಲಿಯೇ ಈ ಫಲಾನುಭವಿಗಳನ್ನು ಸೇರ್ಪಡೆ ಮಾಡಬೇಕು ಎಂದು ತಿಳಿಸಿದೆ.
ಇದರಿಂದಾಗಿ ವಿಶೇಷ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಅತೀ ಸೂಕ್ಷ್ಮ ಸಮುದಾಯಗಳ ಕನಸು ಭಗ್ನವಾಗಿದೆ ಎಂದು ಎಸ್‌ಸಿಎಸ್‌ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಬೇಸರ ವ್ಯಕ್ತಪಡಿಸಿದರು.
‘ಸಭೆ ನಡೆಸಿ ಪರಿಹಾರ ಮಾರ್ಗ’
ಅಲೆಮಾರಿ ಸಮುದಾಯಗಳ ವಸತಿ ಯೋಜನೆ ಸಂಬಂಧ ಶುಕ್ರವಾರ ಸಭೆ ಕರೆಯಲಾಗಿದ್ದು, ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಬಸವರಾಜು ತಿಳಿಸಿದರು. ಚಾಲ್ತಿ ಯೋಜನೆಗೆ ಅನುದಾನ ಕೋರಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ವಿಶೇಷ ಯೋಜನೆಗೆ ಅನುದಾನ ನೀಡಲಾಗಿತ್ತು. ಸ್ಪಷ್ಟನೆ ಇಲ್ಲದೆ ಅನುದಾನ ಖರ್ಚು ಮಾಡಿದರೆ ಆಕ್ಷೇಪ ವ್ಯಕ್ತವಾಗಲಿದೆ ಎಂಬ ಕಾರಣಕ್ಕೆ ಹಣಕಾಸು ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸ್ಪಷ್ಟನೆ ಕೋರಲಾಗಿತ್ತು ಎಂದು ಹೇಳಿದರು.
5 ಲಕ್ಷ ಹೊಸ ಮನೆಗಳ ಗುರಿಯನ್ನು ಸರ್ಕಾರ ನಿಗದಿ ಮಾಡಿದೆ. ಸೂಕ್ಷ್ಮ ಸಮುದಾಯಗಳಿಗೂ ಇದರಲ್ಲೇ ವಸತಿ ಸೌಕರ್ಯ ಕಲ್ಪಿಸಿ ಎಂದು ಹಣಕಾಸು ಇಲಾಖೆ ತಿಳಿಸಿದೆ. ಈ ಬಗ್ಗೆ ಚರ್ಚೆ ನಡೆಸಿ ಮಾರ್ಗೋಪಾಯ ಕಂಡುಕೊಳ್ಳಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
***
ಅಲೆಮಾರಿ ಸಮುದಾಯಗಳ ವಸತಿ ಯೋಜನೆ ಸಂಬಂಧ ಸದ್ಯದಲ್ಲೇ ಸಭೆ ಕರೆಯಲಾಗುವುದು. ಈ ಸಮುದಾಯಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು
- ಕೋಟ ಶ್ರೀನಿವಾಸ ಪೂಜಾರಿ,ಸಮಾಜ ಕಲ್ಯಾಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.