ಬೆಂಗಳೂರು: ಕಾವೇರಿ, ಮೇಕೆದಾಟು ಯೋಜನೆ, ಮಹದಾಯಿ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ವೀರಪ್ಪ ಮೊಯಿಲಿ, ಸದಾನಂದಗೌಡ, ಜಗದೀಶ ಶೆಟ್ಟರ್, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸರ್ವಪಕ್ಷದ ಮುಖಂಡರು, ರೈತ ಸಂಘದವರು, ಸಂಸದರು ಭಾಗಿಯಾಗಿದ್ದರು. ಅಡ್ವೊಕೇಟ್ ಜನರಲ್, ದೆಹಲಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಕಾನೂನು ತಂಡ ಸಹ ಪಾಲ್ಗೊಂಡಿತ್ತು.
ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು.
ಸಿಎಂ ಹೇಳಿದ್ದು..
* ಕಾವೇರಿ, ಮೇಕೆದಾಟು, ಮಹದಾಯಿ ಯೋಜನೆ ಸೇರಿದಂತೆ ಒಟ್ಟಾರೆ ಜಲವಿವಾದಗಳ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಕರ್ನಾಟಕ ರಾಜ್ಯ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯ ವಸ್ತುಸ್ಥಿತಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ವಿವರಿಸಿದರು. ನಂತರ ಕಾತರಕಿ ಹಾಗೂ ಎಜಿ ಅವರು ಕಾನೂನಿನ ದೃಷ್ಟಿಯಿಂದ ಆಗಿರುವ ಪ್ರಕ್ರಿಯೆಗಳನ್ನು ಪ್ರಸ್ತಾಪಿಸಿದರು. ಮಾಜಿ ಸಿಎಂಗಳು ಅವರವರ ಅಭಿಪ್ರಾಯ ತಿಳಿಸಿದ್ದಾರೆ.
* ಜಲ, ಭಾಷೆ, ಗಡಿ ವಿವಾದಗಳ ಬಗ್ಗೆಯಾಗಲೀ ಚರ್ಚೆ ಬಂದಾಗ, ಅವುಗಳ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ ಎಂಬುದನ್ನು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ನಾಡಿನ, ಜನರ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುವ ನಿಲುಗಳಿಗೆ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
* ಆಗಸ್ಟ್ ಕೊನೆಯವರೆಗೆ ತಮಿಳುನಾಡಿಗೆ 86.38 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್‌ನಲ್ಲಿ ಮುಂಗಾರು ಕೊರತೆ, ಜುಲೈನಲ್ಲಿ ವಾಡಿಕೆಗಿಂತ ಜಾಸ್ತಿ, ಆಗಸ್ಟ್ನಲ್ಲಿ ಮತ್ತೆ ಮಳೆ ಕೊರತೆ ಆಗಿದೆ. ಕಬಿನಿ, ಕೆಆರ್‌ಎಸ್, ಹಾರಂಗಿ, ಹೇಮಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಆಗಿಲ್ಲ. ಹೀಗಾಗಿ, ನೀರು ಬಿಡಲಾಗಲಿಲ್ಲ.
* ಫೆಬ್ರುವರಿ 2018ರಲ್ಲಿ ಸುಪ್ರೀಂಕೋರ್ಟ್ ನೀರಿನ ಹಂಚಿಕೆ ಮಾಡಿ, ಪ್ರತಿ ತಿಂಗಳು ಎಷ್ಟೆಷ್ಟು ನೀರು ಬಿಡಬೇಕು ಎಂಬುದನ್ನೂ ಹೇಳಿತ್ತು. ಅದರನ್ವಯ, ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ನೀರು ಬಿಟ್ಟಿದ್ದೇವೆ.
* ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ನಿಯಂತ್ರಣ ಸಮಿತಿಗಳನ್ನು ರಚಿಸಿದೆ. ಕೇಂದ್ರ, ತಮಿಳುನಾಡು ಹಾಗೂ ನಮ್ಮ ಪ್ರತಿನಿಧಿಗಳು ಇರುತ್ತೇವೆ. 5/2/18ರ ಆದೇಶ ಜಾರಿಗೆ ಈ ವ್ಯವಸ್ಥೆ ಮಾಡಲಾಗಿದೆ. 177.25 ಟಿಎಂಸಿ ನೀರನ್ನು ಸಾಮಾನ್ಯ ವರ್ಷಗಳಲ್ಲಿ ಬಿಳಿಗುಂಡ್ಲುವಿಗೆ ಬಿಡಬೇಕು. 192 ಟಿಎಂಸಿ ಅಂತ ಟ್ರಿಬ್ಯುನಲ್ ಆದೇಶಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಅಲ್ಲಿ 177.25 ಅಂತ ಹೇಳಿದೆ. ಐದಾರು ವರ್ಷಕ್ಕೊಮ್ಮೆ ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿ ಬರುತ್ತದೆ. ನೀರು ಬಿಡಕ್ಕಾಗಲ್ಲ ಅಂತ ಪ್ರಾಧಿಕಾರ, ಸಮಿತಿ ಮುಂದೆ ಹೇಳುತ್ತಲೇ ಬಂದಿದ್ದೇವೆ. ರೈತರ ಬೆಳೆ ರಕ್ಷಣೆ, ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ವಾದ ಮಂಡಿಸಿದ್ದೇವೆ.
* ಆಗಸ್ಟ್ 11ರಂದು ಪ್ರಾಧಿಕಾರವು 15 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಹೇಳಿತ್ತು. ಅಷ್ಟು ಕೊಡಲು ನೀರಿಲ್ಲ ಎಂದಿದ್ದಕ್ಕೆ ತಮಿಳುನಾಡು ಎದ್ದು ಹೋಗಿತ್ತು. ನಿಯಂತ್ರಣ ಸಮಿತಿಯವರು 10 ಸಾವಿರ ಕ್ಯುಸೆಕ್ಸ್ ಅನ್ನು 15 ದಿನ ಕೊಡಬೇಕೆಂದಿದ್ದರು. ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದೆವು. ಅಷ್ಟರಲ್ಲಿ ತಮಿಳುನಾಡು ತಕರಾರು ಅರ್ಜಿ ಸಲ್ಲಿಸಿದೆ. ಮೆಟ್ಟೂರು ಡ್ಯಾಂನಲ್ಲಿ 63 ಟಿಎಂಸಿ ನೀರಿತ್ತು. ಕುರುವೈ ಬೆಳೆಗೆ 32 ಟಿಎಂಸಿ ಸಾಕು. 1.85 ಲಕ್ಷ ಎಕರೆಯಲ್ಲಿ ಬೆಳೆ ಬೆಳೆತೀವಿ ಅಂದಿದ್ದ ತಮಿಳುನಾಡಿನವರು ಈಗ ಜಾಸ್ತಿ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಹೆಚ್ಚು ನೀರು ಬಳಸುತ್ತಿದ್ದಾರೆ. ಆದರೂ ನೀರು ಬಿಟ್ಟಿಲ್ಲ ಎಂದು ಸಭಾತ್ಯಾಗ ಮಾಡುವುದನ್ನೆಲ್ಲ ಮಾಡುತ್ತಿದ್ದಾರೆ. ನಮ್ಮ ರೈತರ ಬೆಳೆ, ಕುಡಿಯುವ ನೀರು ಗಮನದಲ್ಲಿಟ್ಟುಕೊಳ್ಳಬೇಕು.
* ನ್ಯಾಯಾಧಿಕರಣ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಸಂಕಷ್ಟ ಸೂತ್ರ ಆಗಿಲ್ಲ. ಅದು ಆಗಬೇಕು. ಮೇಕೆದಾಟು ಸಮತೋಲನ ಜಲಾಶಯ ಕಟ್ಟಬೇಕು. ಸಂಕಷ್ಟ ಬಂದಾಗ 67 ಟಿಎಂಸಿ ಮೇಕೆದಾಟುವಿನಲ್ಲಿ ಇರುವುದರಿಂದ ಅವರಿಗೂ ನೀರು ಕೊಡಬಹುದು. ಜಲ ಆಯೋಗ ಹೇಳಿದಂತೆ ಡಿಪಿಆರ್ ಸಲ್ಲಿಸಿದ್ದೇವೆ. ಕಾವೇರಿ ನೀರು ವಿಚಾರಕ್ಕೆ ತ್ರಿಸದಸ್ಯ ಪೀಠ ರಚನೆ ಆಗಿದೆ. 25ಕ್ಕೆ ಅದು ವಿಚಾರಣೆಗೆ ಬರಲಿದೆ. ಸಮರ್ಥ ವಾದ ಮಾಡಬೇಕು. ಅವರ ಅರ್ಜಿ ವಜಾ ಆಗುವಂತೆ ಮಾಡಬೇಕು. ಕರ್ನಾಟಕದ ಹಿತ ಕಾಪಾಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದೇವೆ.
* ಕೃಷ್ಣಾ ಮೇಲ್ದಂಡೆ ಅಧಿಸೂಚನೆ ಆಗಿಲ್ಲ, ಮೇಕೆದಾಟು, ಮಹದಾಯಿ ಎಲ್ಲ ನೀರಾವರಿ ಬಗ್ಗೆ ಸರ್ವಪಕ್ಷ ನಿಯೋಗವನ್ನು ಕರೆದೊಯ್ದು ಪ್ರಧಾನಿ, ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಪ್ರಸ್ತಾಪಿಸಿದ್ದೇವೆ. ಎಲ್ಲ ಜಲ ವಿವಾದಗಳಲ್ಲಿ ಕೇಂದ್ರ ಸರ್ಕಾರವೂ ಪ್ರತಿವಾದಿ ಆಗಿದೆ.
* ಮಹದಾಯಿಯಲ್ಲಿ ಅರಣ್ಯ, ಪರಿಸರ ತೀರುವಳಿ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆಗೆ ಅಧಿಸೂಚನೆ ಹೊರಡಿಸಬೇಕಿದೆ. ಎಲ್ಲವನ್ನೂ ಕೇಂದ್ರದ ಗಮನಕ್ಕೆ ತರಬೇಕಿದೆ. ಸರ್ವಪಕ್ಷ ನಿಯೋಗ ಒಯ್ಯಲು ಚರ್ಚಿಸಿದ್ದೇವೆ. ಸರ್ವಪಕ್ಷಗಳ ಸಲಹೆ ಪಡೆದಿದ್ದೇವೆ. ಸಮರ್ಥ ವಾದ ಮಂಡಿಸಲು ಹೇಳಿದ್ದಾರೆ. ಈ ಕುರಿತಂತೆ ಕಾನೂನು ತಂಡಕ್ಕೆ ಸೂಚಿಸಿದ್ದೇವೆ. ಸರ್ವಪಕ್ಷ ನಿಯೋಗಕ್ಕೆ ಎಲ್ಲರೂ ಒಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.