ಬೆಂಗಳೂರು: ‘ಕಾವೇರಿ, ಮಹದಾಯಿ, ಕೃಷ್ಣಾ ಮತ್ತಿತರ ಜಲವಿವಾದ, ರಾಜ್ಯದ ಅಣೆಕಟ್ಟೆಗಳಲ್ಲಿ ನೀರಿನ ಪರಿಸ್ಥಿತಿ, ಕುರಿತು ಚರ್ಚಿಸಲು ಇದೇ 23ರಂದು ಸರ್ವಪಕ್ಷಗಳ ಸಭೆ ಕರೆಯಲಾಗಿದೆ. ಈ ಸಭೆಗೆ ಕೆಲವು ಸಂಸದರಿಗೂ ಆಹ್ವಾನ ನೀಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಕಾನೂನು ಹೋರಾಟ ಹೇಗೆ ಮಾಡಬೇಕೆಂಬುದರ ಬಗ್ಗೆ ಅಡ್ವೋಕೇಟ್ ಜನರಲ್ ಅವರಿಗೆ ಬಿಟ್ಟಿದ್ದೇವೆ’ ಎಂದರು.
‘ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. ಹೀಗಾಗಿ, ರಾಜ್ಯದ ಹಾಗೂ ರೈತರ ಹಿತ ಕಾಯುವುದು ನಮ್ಮ ಕರ್ತವ್ಯ. ರಾಜ್ಯದಲ್ಲಿನ ಅಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕುಸಿದಿದ್ದು, ಈ ವಿಚಾರವಾಗಿ ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದೇವೆ.
‘ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ (ಆಗಸ್ಟ್ 21) ಮನವಿ ಸಲ್ಲಿಸುತ್ತಿದ್ದೇವೆ. ಈಗಾಗಲೇ ನೀರು ಹರಿಸುವ ನಿರ್ಧಾರ ಮರು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ. ನಾವು ರೈತರ ಹಿತವನ್ನು ಕಾಯಬೇಕು. ಕೋರ್ಟ್ ನಿರ್ಧಾರಕ್ಕೂ ಆದ್ಯತೆ ನೀಡಬೇಕು’ ಎಂದರು.
‘ಬಿಜೆಪಿ ಹಾಗೂ ಜೆಡಿಎಸ್ ಸ್ನೇಹಿತರು ಈ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರಿಗೆ ತಮ್ಮ ಕಾಲದಲ್ಲಿ ಏನಾಗಿತ್ತು ಎಂಬ ಅರಿವಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದೇ ಸರ್ವಪಕ್ಷ ಸಭೆ ಕರೆಯಲಾಗಿದೆ’ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, ‘ಅದು ಅವರದೇ ರಸ್ತೆ ಅಲ್ಲವೇ. ಅಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಅವರು ಹೋರಾಟ ಮಾಡಲಿ’ ಎಂದು ತಿಳಿಸಿದರು.
ಓದಿ... ‘ನಮ್ಮ ನೀರು, ನಮ್ಮ ಹಕ್ಕು’ ಎಂದವರು ಯಾಕೆ ಬಿಟ್ಟರು: ಡಿಕೆಶಿ ವಿರುದ್ಧ HDK ಕಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.