ಕೊಪ್ಪಳ: ಭಾರತ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯಗೊಂಡು ಸಂಭ್ರಮದಲ್ಲಿದ್ದರೆ ಹೈದರಾಬಾದ್ ಪ್ರಾಂತಕ್ಕೆ ಮಾತ್ರ ಆ ಖುಷಿ ಇರಲಿಲ್ಲ. ತನ್ನ ಸ್ವಾತಂತ್ರ್ಯಕ್ಕಾಗಿ ಈ ಪ್ರಾಂತ್ಯದ ಜನ ಮತ್ತೊಂದು ವರ್ಷ ಹೋರಾಡಬೇಕಾಯಿತು.
ರಜಾಕಾರರ ಅತಿಯಾದ ಹಿಂಸೆ, ಕಠಿಣ ಕಾನೂನುಗಳು ವಿಮೋಚನಾ ಹೋರಾಟಕ್ಕೆ ನಾಂದಿಯಾದವು. ಸಾಮಾನ್ಯ ಜನರಿಗೆ ಅಮಾನವೀಯ ಹಾಗೂ ಅಪಮಾನ ಮಾಡುವ ಕರಗಳು ಇದ್ದವು. ನಬಾಬನನ್ನು ಭೇಟಿಯಾಗಲು ಬಯಸುವ ಪ್ರತಿಯೊಬ್ಬರೂ ‘ನಜರಾನಾ‘ ಕರ ಕೊಡಬೇಕಿತ್ತು. ಇದು ಕೂಡ ಜನರಲ್ಲಿ ಹೈದರಾಬಾದ್ ಪ್ರಾಂತದಿಂದ ಮುಕ್ತಿ ಪಡೆಯಲು ಪ್ರೇರಣೆಯಾದ ಅಂಶಗಳಲ್ಲಿ ಒಂದು.
ವಿಮೋಚನಾ ಹೋರಾಟ ಕೇವಲ ನವಾಬರ ಹಾವಳಿ ವಿರುದ್ಧದ ಆಕ್ರೋಶವಷ್ಟೇ ಆಗಿರಲಿಲ್ಲ. ಸಂಪೂರ್ಣ ನೆಲಕಚ್ಚಿದ್ದ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ಬದುಕು, ಆರ್ಥಿಕ ಶಕ್ತಿಯ ಅಭಿವೃದ್ಧಿಯ ದ್ಯೋತಕವೂ ಆಗಿತ್ತು.
ಆಗಿನ ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಪ್ರೌಢಶಾಲೆಗಳು ಮಾತ್ರ ಇದ್ದವು. 42 ಹಳ್ಳಿಗಳಿಗೆ ಒಂದು ಸರ್ಕಾರಿ ಶಾಲೆಯಿತ್ತು. ಶಿಕ್ಷಣ ಶ್ರೀಮಂತರ ಸೊತ್ತು ಎನ್ನುವಂತೆ ಆಗಿತ್ತು. ಆಗ ರಾಯಚೂರು ಜಿಲ್ಲೆಯ ಶೈಕ್ಷಣಿಕ ಪ್ರಮಾಣ ಶೇ 7ರಿಂದ ಶೇ 9ರ ನಡುವೆ ಇತ್ತು. ಹೈದರಾಬಾದ್ ಕರ್ನಾಟಕ ಪ್ರಾಂತ ಶೇ 85ರಷ್ಟು ಜನ ವ್ಯವಸಾಯದ ಮೇಲೆ ಆಧಾರಿತವಾಗಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಕೃಷ್ಣದೇವರಾಯ ಕಾಲುವೆಯಿಂದ ಹಳೆ ಮಾಗಾಣಿ ಬಿಟ್ಟರೆ ಎಲ್ಲಿಯೂ ನೀರಾವರಿ ಇರಲಿಲ್ಲ.
ದೇಶ ಸ್ವಾತಂತ್ರ್ಯಗೊಂಡರೂ 1947ರ ಜೂನ್ 26ರಂದು ಹೈದರಾಬಾದ್‌ನ ನಿಜಾಮ ನಾನು ಸ್ವತಂತ್ರ್ಯವಾಗಿ ಇರುತ್ತೇನೆ ಎಂದು ಹೊರಡಿಸಿದ ಫಾರ್ಮಾನು ಹೈದರಾಬಾದ್ ಪ್ರಾಂತದ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿತು.
ಅದೇ ವರ್ಷ ವೀರಭದ್ರಪ್ಪ ಶಿರೂರ ಅವರು ತಮ್ಮ ಕಾರ್ಯಕರ್ತರ ಜೊತೆ ಕೊಪ್ಪಳ ರೈಲು ನಿಲ್ದಾಣದಲ್ಲಿ ಜಯಪ್ರಕಾಶರನ್ನು ಭೇಟಿಯಾಗಿ ಹೋರಾಟಕ್ಕೆ ಸಹಾಯ ನೀಡಬೇಕು ಎಂದು ಕೋರಿದರು. ದೇಶ ಸ್ವಾತಂತ್ರ್ಯಗೊಂಡರೂ ನವಾಬರು ಹೈದರಾಬಾದ್ ಪ್ರಾಂತದ ಜನ ಮಾತ್ರ ರಾಷ್ಟ್ರಧ್ವಜ ಹಾರಿಸದಂತೆ ಫಾರ್ಮಾನು ಹೊರಡಿಸಿದ್ದರು. ಸಭೆ, ಸಮಾರಂಭಗಳಿಗೂ ಅವಕಾಶ ಇರಲಿಲ್ಲ.
ಜಿಲ್ಲೆಯ ಹೋರಾಟಗಾರರು ನವಾಬನ ಆದೇಶ ಧಿಕ್ಕರಿಸಿ ಕೊಪ್ಪಳ, ಕಾತರಕಿ, ಕಿನ್ನಾಳ, ಕುಕನೂರು, ಯಲಬುರ್ಗಾದಲ್ಲಿ ಒಮ್ಮೆಲೆ ಧ್ವಜ ಹಾರಿಸಿದ್ದರು. ಲಕ್ಷ್ಮಣಾಚಾರ್ಯ ಅಗ್ನಿಹೋತ್ರಿ, ವೀರಭದ್ರಪ್ಪ, ಹಂಪಿಕರ ನರಸಿಂಗರಾವ್, ಇಟಗಿ ರಾಘವೇಂದ್ರರಾವ್, ರ್‍ಯಾವಣಕಿ ಶ್ರೀನಿವಾಸರಾಯರು, ಸಿದ್ದಪ್ಪ ಮಾಸ್ತರರು, ಬಂಗಾರಶೆಟ್ಟರು ಹೀಗೆ ವಿವಿಧ ಜನ ಧ್ವಜಾರೋಹಣ ಮಾಡಿದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದರು.
ನಿಜಾಮರ ವಿರುದ್ಧದ ಹೋರಾಟಕ್ಕಾಗಿ ಗಡಿ ಶಿಬಿರಗಳ ಸ್ಥಾಪನೆ, ನವಲಿಯಲ್ಲಿ ರೈತ ಮುಖಂಡ ಮಾಕಣ್ಣ ಕಂಬಳಿ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದು, ಹಿರೇವಂಕಲಗುಂಟಿ ಪೊಲೀಸ್ ಠಾಣೆ ಮೇಲೆ ದಾಳಿ, ಮುಧೋಳ–ಗಜೇಂದ್ರಗಡದ ನಡುವೆ ಕಗ್ಗಲ್ಲು ಹಳ್ಳದ ಯುದ್ಧ, ಹುಲಿಹೈದರದಲ್ಲಿ ತಹಶೀಲ್ದಾರ್ ಮೇಲೆ ಲಾಠಿ ಏಟು, ಕಲಾಲಬಂಡಿ ಕಾರ್ಯಾಚರಣೆ, ಸಂತೆ ಮುಗಿಸಿಕೊಂಡು ತೆರಳುತ್ತಿದ್ದ ಮುಕ್ಕುಂಪಿ ಗ್ರಾಮದ ಮಹಿಳೆಯರ ಮೇಲೆ ರಜಾಕಾರರು ಅತ್ಯಾಚಾರಕ್ಕೆ ಮುಂದಾದಾಗ ಕೆಲ ಮಹಿಳೆಯರು ಸಂತೆಯಲ್ಲಿ ತಂದಿದ್ದ ಈಳಿಗೆಗಳನ್ನು ರಜಾಕಾರರ ಮೇಲೆ ಎಸೆದ ಪ್ರಸಂಗ ಹೀಗೆ ಅನೇಕ ಘಟನೆಗಳು ಹೋರಾಟದ ತೀವ್ರತೆಗೆ ಸಾಕ್ಷಿಯಂತಿವೆ.
ಆಪರೇಷನ್ ಪೊಲೊಗೆ ಒಲಿದ ಯಶಸ್ಸು
ಜನರ ಭಾವನೆಗಳಿಗೆ ಬೆಲೆ ಕೊಟ್ಟು ಭಾರತ ಸರ್ಕಾರ 1948ರ ಸೆ. 13ರಂದು ‘ಪೊಲೀಸ್ ಆಕ್ಷ್ಯನ್ ಆಪರೇಷನ್ ಪೊಲೊ‘ ನಡೆಸಿತು.
ಭಾರತದ ಸೈನ್ಯ ಹೈದರಾಬಾದ್‌ನ ಪ್ರಾಂತವನ್ನು ಸುತ್ತವರಿಯಿತು. ದಕ್ಷಿಣ ಭಾರತದ ಪ್ರಧಾನ ದಂಡನಾಯಕ ಲೆಫ್ಟಿನೆಂಟ್ ಜನರಲ್ ಮಹಾರಾಜ ಸಿಂಗ್ ನೇತೃತ್ವದಲ್ಲಿ ಸೈನ್ಯ ಮುನ್ನಡೆಯಿತು. ನಳದುರ್ಗ ಮತ್ತು ಮುನಿರಾಬಾದ್ ಬಳಿ ಯುದ್ಧವಾಗಿ ನಿಜಾಮನು ನಾಲ್ಕು ದಿನಗಳಲ್ಲಿ ಸೋಲೊಪ್ಪಿಕೊಂಡನು. ಆಗ ಹೈದರಾಬಾದ್ ಪ್ರಾಂತ ಭಾರತದ ಭಾಗವಾಯಿತು. ಅದೇ ಕಾರಣಕ್ಕಾಗಿ ಪ್ರತಿ ವರ್ಷದ ಸೆ. 17ರಂದು ಹೈದರಾಬಾದ್–ಕರ್ನಾಟಕ ವಿಮೋಚನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಈ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಎಂದು ಹೆಸರು ಬದಲಿಸಿತು.
ನವಾಬ ಭೇಟಿಯಾಗಲು ಹಣ ನಿಗದಿ ಮಾಡಿದ್ದ. ಒಮ್ಮೆ ರಾಯಚೂರಿಗೆ ಬಂದಿದ್ದಾಗ ಪಂಡಿತ್ ತಾರಾನಾಥರು ಒಂದು ಬಿಲ್ಲೆಯನ್ನು ಎಸೆದು ನಿನ್ನಂಥ ನಿರ್ದಯಿ ಹಾಗೂ ಕ್ರೂರ ವ್ಯಕ್ತಿತ್ವಕ್ಕೆ ಇದೇ ‘ನಜರಾನಾ‘ ಎಂದು ಹೊರಟು ಹೋಗಿಬಿಡುತ್ತಾರೆ. ಮುಂದೆ ತಾರಾನಾಥರು, ನಿಜಾಮನ ವಿರುದ್ಧ ಲೇಖನ ಬರೆಯುತ್ತಾರೆ. ಅದಕ್ಕಾಗಿ ನಿಜಾಮ, ಅವರನ್ನು ಗಡಿಪಾರು ಮಾಡುತ್ತಾನೆ.
ರಾಮಣ್ಣ ಹವಳೆ, ಸಾಹಿತಿ
(ಮಾಹಿತಿ: ಹೈದರಾಬಾದ್ ವಿಮೋಚನಾ ಚಳವಳಿ, ರಾಮಣ್ಣ ಹವಳೆ ಅವರ ಲೇಖನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.