ಬೆಂಗಳೂರು/ಕೋಲಾರ: ಜಾತಿ ನಿಂದನೆ ಹಾಗೂ ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಲಂಚದ ಬೇಡಿಕೆ ಇರಿಸಿದ್ದ ಆರೋಪದ ಮೇಲೆ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶನಿವಾರ ಸಂಜೆ ಕೋಲಾರದಲ್ಲಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದರು.
ಆಂಧ್ರಪ್ರದೇಶದ ತಿರುಪತಿಯತ್ತ ತೆರಳುತ್ತಿದ್ದ ಮುನಿರತ್ನ ಅವರ ಮೊಬೈಲ್ ಫೋನ್ ಲೊಕೇಷನ್ ಆಧರಿಸಿ, ಜಾಡು ಹಿಡಿದ ಪೊಲೀಸರು ಕರ್ನಾಟಕ– ಆಂಧ್ರಪ್ರದೇಶದ ಗಡಿಭಾಗವಾದ ನಂಗಲಿ ಜೆಎಸ್‌ಆರ್ ಟೋಲ್ ಬಳಿ ವಶಕ್ಕೆ ಪಡೆದುಕೊಂಡರು.
‘ಜಂಟಿ ಕಾರ್ಯಾಚರಣೆ ನಡೆಸಿ ಮುನಿರತ್ನ ಅವರನ್ನು ಬಂಧಿಸಲಾಯಿತು. ವೈಯಾಲಿಕಾವಲ್ ಪೊಲೀಸರ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡಿದ್ದೆವು’ ಎಂದು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಮುಳಬಾಗಿಲು ವಿಭಾಗದ ಡಿವೈಎಸ್ಪಿ ಡಿ.ಸಿ.ನಂದಕುಮಾರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಎಸ್.ಆರ್. ಗೌಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಬೆಳಿಗ್ಗೆಯಿಂದಲೂ ಮುನಿರತ್ನ ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿತ್ತು. ಅವರ ಮೊಬೈಲ್ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು. ನಾಪತ್ತೆ ಆಗಿದ್ದ ಅವರಿಗಾಗಿ ಪೊಲೀಸರು ಹಲವೆಡೆ ಹುಡುಕಾಟ ನಡೆಸಿದ್ದರು.
‘ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಿ, ಬಿಬಿಎಂಪಿ ಮಾಜಿ ಸದಸ್ಯ, ಗೋಕುಲ ಮೊದಲ ಹಂತದ ನಿವಾಸಿ ವೇಲುನಾಯ್ಕರ್ ದೂರು ನೀಡಿದ್ದರು.
‘ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಮುನಿರತ್ನ ಹಾಗೂ ಅವರ ಆಪ್ತ ವಸಂತ ಕುಮಾರ್ ಅವರು ₹30 ಲಕ್ಷಕ್ಕೆ ಬೇಡಿಕೆ ಇಟ್ಟು ಕಿರುಕುಳು ನೀಡುತ್ತಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಅವರು ದೂರು ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಜಾತಿ ನಿಂದನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಡಿಯೊ ತುಣುಕು ಪಡೆಯಲಾಗಿದೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿ ಧ್ವನಿ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮುನಿರತ್ನ ಅವರ ಗನ್‌ಮ್ಯಾನ್ ವಿಜಯ್‌ಕುಮಾರ್ (ಸರ್ಕಾರಿ ನೌಕರ), ಆಪ್ತ ಸಹಾಯಕ ಅಭಿಷೇಕ್ ಹಾಗೂ ಆಪ್ತ ವಸಂತಕುಮಾರ್ ಅವರನ್ನು ಪೊಲೀಸರು ತಡರಾತ್ರಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ?:
‘ಆದಿ ದ್ರಾವಿಡ (ಎಸ್.ಸಿ) ಜನಾಂಗಕ್ಕೆ ಸೇರಿರುವ ನಾನು, 2015ರಿಂದ 2020ರ ವರೆಗೆ ಲಕ್ಷ್ಮಿದೇವಿ ನಗರ ವಾರ್ಡ್ ಸಂಖ್ಯೆ– 42ರ ಬಿಬಿಎಂಪಿ ಸದಸ್ಯನಾಗಿದ್ದೆ. ಬಿಬಿಎಂಪಿ ಕೇಂದ್ರ ಕಚೇರಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿದ್ದೆ. ಕೆಲವು ವಿಚಾರಗಳಲ್ಲಿ ನನ್ನ ಹಾಗೂ ಮುನಿರತ್ನ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸ್ನೇಹಿತರು, ಹಿತೈಷಿಗಳ ಎದುರು ಮುನಿರತ್ನ, ನನ್ನ ಜಾತಿ ನಿಂದನೆ ಮಾಡುತ್ತಿದ್ದರು. ಕೆಟ್ಟ ಪದಗಳನ್ನು ಬಳಸಿ, ನನ್ನನ್ನು ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡಬಾರದೆಂದು ಹೇಳುತ್ತಿದ್ದರು’ ಎಂದು ವೇಲುನಾಯ್ಕರ್ ದೂರು ನೀಡಿದ್ದಾರೆ.
‘ಮುನಿರತ್ನ ಅವರು ಲಂಚಕ್ಕಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜು ಅಳಲು ತೋಡಿಕೊಂಡಿದ್ದರು. ಒಂದು ರೂಪಾಯಿ ಲಂಚ ಕೊಡದೆ ಕೆಲಸ ಮಾಡುವಂತೆ ಅವರಿಗೆ ತಿಳಿಸಿದ್ದೆ. ನಂತರ, ಚೆಲುವರಾಜು ಅವರನ್ನು ಮುನಿರತ್ನ ತನ್ನ ಕಚೇರಿಗೆ ಕರೆಸಿಕೊಂಡು, ನನ್ನ ಜಾತಿ ನಿಂದನೆ ಮಾಡಿ ಕುಟುಂಬದ ಸದಸ್ಯರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ವೇಲುನಾಯ್ಕರ್ ಮಾತು ಕೇಳಿ ಕಮಿಷನ್ ಕೊಡುತ್ತಿಲ್ಲವೆಂದು ಬೆದರಿಸಿದ್ದರು. ದಲಿತ ಹಾಗೂ ಒಕ್ಕಲಿಗ ಸಮುದಾಯದ ಮಧ್ಯೆ ವೈಷಮ್ಯ ತಂದು ಘರ್ಷಣೆಗೆ ಪ್ರಚೋದನೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದರು. ಅದನ್ನು ಚೆಲುವರಾಜು ಆಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುನಿರತ್ನ ಬಂಧನ ದ್ವೇಷದ ರಾಜಕಾರಣ. ಆ ಧ್ವನಿ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಬಂಧಿಸಬೇಕಿತ್ತು. ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದ್ದಕ್ಕೆ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಿದೆ.–ಆರ್.ಅಶೋಕ, ವಿರೋಧ ಪಕ್ಷದ ನಾಯಕ
ಚೆಲುವರಾಜು ಮೇಲೆ ಶಾಸಕ ಸೇರಿ ಮೂವರಿಂದ ಹಲ್ಲೆ
‘ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 42ರಲ್ಲಿ (ಲಕ್ಷ್ಮೀದೇವಿನಗರ) ಗಂಗಾ ಎಂಟರ್‌ಪ್ರೈಸಸ್ ಎಂಬ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದೆ. 2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಗನ್‌ಮ್ಯಾನ್ ವಿಜಯ್‌ಕುಮಾರ್ ಕರೆ ಮಾಡಿ, ಕಚೇರಿಗೆ ಬರುವಂತೆ ಹೇಳಿದ್ದರು. ಕಚೇರಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಕೆಲಸಕ್ಕೆ 10 ಆಟೊ ರಿಕ್ಷಾ ಕೊಡಿಸುತ್ತೇನೆ. ಇದಕ್ಕೆ ₹20 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಸ್ನೇಹಿತರ ಬಳಿ ಸಾಲ ಪಡೆದು ₹20 ಲಕ್ಷ ತೆಗೆದುಕೊಂಡು ಹೋಗಿದ್ದೆ. ಅವರ ಸೂಚನೆಯಂತೆ ಗನ್‌ಮ್ಯಾನ್‌ಗೆ ನೀಡಿದ್ದೆ. ಎರಡು ದಿನಗಳ ಬಳಿಕ ಶಾಸಕರನ್ನು ವಿಚಾರಿಸಿದಾಗ ಹೆಚ್ಚುವರಿ 10 ಆಟೊ ನೀಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದರು’ ಎಂದು ಚೆಲುವರಾಜು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘2023ರ ಸೆಪ್ಟೆಂಬರ್‌ನಲ್ಲಿ ಆಪ್ತ ಸಹಾಯಕ ಅಭಿಷೇಕ್ ಅವರಿಂದ ಕರೆ ಮಾಡಿಸಿ ಕಚೇರಿಗೆ ಬರುವಂತೆ ತಿಳಿಸಿದ್ದರು. ಆಗ ₹30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ನೀಡಲು ಸಾಧ್ಯವಿಲ್ಲ. ಸಾಲ ಮಾಡಿ, ₹15 ಲಕ್ಷ ಹೊಂದಿಸುತ್ತೇನೆ ಎಂದಿದ್ದೆ. ಅದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇಗ ಹಣ ತಂದು ಕೊಡಲು ಹೇಳಿದ್ದರು. ಮತ್ತೆ ಕರೆ ಮಾಡಿ ಕಚೇರಿಗೆ ಬರುವಂತೆ ಹೇಳಿದ್ದರು. ಹಣ ತಂದಿಲ್ಲ ಎಂದಾಗ, ನನ್ನ ಮುಖದ ಮೇಲೆ ಶಾಸಕರು ಹಲ್ಲೆ ನಡೆಸಿದ್ದರು.
‘ನಾನು ಐದು ವರ್ಷ ಶಾಸಕನಾಗಿರುತ್ತೇನೆ. ಹೇಳಿದಂತೆ ನಡೆದುಕೊಳ್ಳಬೇಕು. ದುಡ್ಡು ತಂದು ಕೊಟ್ಟರೆ ಕೆಲಸ ಮಾಡಲು ಬಿಡುತ್ತೇನೆ. ಇಲ್ಲದಿದ್ದರೆ ಬೇರೆಯವರಿಗೆ ಗುತ್ತಿಗೆ ಕೊಡಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ತುರ್ತಾಗಿ ಏಳು ದಿನಗಳ ಅಲ್ಪಾವಧಿಗೆ ಗುತ್ತಿಗೆ ಕರೆದು ಕಾರ್ಯಾದೇಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಹಣ ಕೊಡದ ಕಾರಣಕ್ಕೆ ಅಭಿಷೇಕ್, ವಿಜಯಕುಮಾರ್ ಅವರೂ ಹಲ್ಲೆ ನಡೆಸಿದ್ದರು’ ಎಂದು ಚೆಲುವರಾಜು ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.