ಬೆಂಗಳೂರು: ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸಂಕಷ್ಟ ಎದುರಾಗಿರುವ ಬೆನ್ನಲ್ಲೇ ಬಿಜೆಪಿಯಿಂದ ಅವರಿಗೆ ನೋಟಿಸ್ ಜಾರಿಯಾಗಿದೆ.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಮುನಿರತ್ನ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ನೋಟಿಸ್ ನೀಡಿದ್ದಾರೆ.
ಮುನಿರತ್ನ ಅವರದ್ದು ಎನ್ನಲಾದ ಆಡಿಯೋದಲ್ಲಿ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂಬುದು ಹಲವೆಡೆ ಪ್ರಸಾರವಾಗುತ್ತಿದೆ. ಇದು ಪಕ್ಷದ ಶಿಸ್ತಿಗೆ ದಕ್ಕೆಯನ್ನುಂಟು ಮಾಡಿದೆ. ನೋಟಿಸ್ ತಲುಪಿದ 5 ದಿನಗಳ ಒಳಗಾಗಿ ಶಿಸ್ತು ಸಮಿತಿ ಮುಂದೆ ಹಾಜರಾಗಿ ಸ್ಪಷ್ಟಿಕರಣ ನೀಡಬೇಕು ಎಂದು ತಿಳಿಸಲಾಗಿದೆ.
ಕೋಲಾರ ಬಳಿ ಮುನಿರತ್ನ ಪೊಲೀಸ್ ವಶಕ್ಕೆ
ಲಂಚ ಹಾಗೂ ಜಾತಿ ನಿಂದನೆ ಆರೋಪದ ಅಡಿ ದಾಖಲಾಗಿದ್ದ ಪ್ರಕರಣದ ಸಂಬಂಧ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ನಂಗಲಿ ಎಂಬಲ್ಲಿ ವೈಯ್ಯಾಲಿಕಾವಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ಧಾರೆ.
ಕರ್ನಾಟಕ– ಆಂಧ್ರಪ್ರದೇಶದ ಗಡಿಯಲ್ಲಿ ಶಾಸಕರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆ ತರಲಾಗುತ್ತಿದೆ. ಮುನಿರತ್ನ ಅವರು ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಮಾಹಿತಿ ಸಿಕ್ಕಿತ್ತು. ಮೊಬೈಲ್ ಲೊಕೇಶನ್ ಆಧರಿಸಿ ಅವರಿದ್ದ ಸ್ಥಳವನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದರು.
ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ₹30 ಲಕ್ಷಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಚೆಲುವರಾಜು ಎಂಬುವವರು ದೂರು ನೀಡಿದ್ದರು. ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಜಾತಿ ನಿಂದನೆ ಆರೋಪದ ಅಡಿ ಇದೇ ಠಾಣೆಯಲ್ಲಿ ಶಾಸಕರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿತ್ತು. ಈ ಎರಡು ಪ್ರಕರಣದಲ್ಲಿ ಶಾಸಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.