ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ನೇರಪ್ರಸಾರದ ವೇಳೆ ಅವಹೇಳನಕಾರಿ ಪದ ಬಳಸಿ ಜಾತಿ ನಿಂದನೆ ಮಾಡಿದ ಆರೋಪದಡಿ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಮಧುಸೂದನ್ ಕೆ.ಎನ್. ಅವರು ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪಿ ಉಪೇಂದ್ರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರರ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆ ನಡೆಸಲಾಗುವುದು. ನಂತರ, ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಆರೋಪಿ ನೀಡಿರುವ ಹೇಳಿಕೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿವೆ.
ದೂರಿನ ವಿವರ
‘ನೇರಪ್ರಸಾರದ ವೇಳೆಯಲ್ಲಿ ನಟ ಉಪೇಂದ್ರ ಅವರು ಜಾತಿ ನಿಂದನೆ ಪದ ಬಳಕೆ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅದನ್ನು ಗಮನಿಸಿ ಹಲವರು ದೂರು ನೀಡಿದ್ದಾರೆ. ನಟ ಉಪೇಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ’ ಎಂದು ಮಧುಸೂದನ್ ದೂರಿನಲ್ಲಿ ತಿಳಿಸಿದ್ದಾರೆ.
ಓದಿ: ಜಾತಿ ನಿಂದನೆ ಆರೋಪ: ನಟ ಉಪೇಂದ್ರ ಪ್ರತಿಕ್ರಿಯೆ
‘ನಟನಾಗಿ ಹೆಸರು ಮಾಡಿರುವ ಉಪೇಂದ್ರ, ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕು. ಈ ನಟನನ್ನು ಅನುಕರಣೆ ಮಾಡುವವರು ಇದೇ ರೀತಿ ಮಾತನಾಡಿದರೆ, ಸಾರ್ವಜನಿಕರ ಶಾಂತಿಗೆ ಧಕ್ಕೆ ಬರಲಿದೆ. ಹೀಗಾಗಿ, ಜಾತಿ ನಿಂದನೆ ಮಾಡಿರುವ ಉಪೇಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.