ಬೆಂಗಳೂರು: ‘ತೀರ್ಥಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿಯ ಆಲಗೇರಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿ 10 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದು ಇದನ್ನು ತೆರವುಗೊಳಿಸಲು ಆದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಆಲಗೇರಿ ಗ್ರಾಮದ ಜಿ.ವಿ.ಚಂದ್ರಶೇಖರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ತೀರ್ಥಹಳ್ಳಿ ತಾಲ್ಲೂಕು ತಹಶೀಲ್ದಾರ್, ಆಗುಂಬೆ ವಲಯ ಮೇಗರವಳ್ಳಿ ಅರಣ್ಯ ಸಂರಕ್ಷಣಾ ಅಧಿಕಾರಿ, ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ?: 'ತೀರ್ಥಹಳ್ಳಿ ತಾಲ್ಲೂಕಿನ ದೂರ್ವಾಸಪುರ ಪೋಸ್ಟ್‌ನ ಆಲಗೇರಿ ಗ್ರಾಮದ ಸರ್ವೇ ನಂ 16ರಲ್ಲಿ ಸರ್ಕಾರಿ ಸೊಪ್ಪಿನ ಬೆಟ್ಟ ಹಾಗೂ ಕಿರು ಅರಣ್ಯ ಇದೆ. ಇದಕ್ಕೆ ಸೇರಿದ ಜಾಗದಲ್ಲಿ 10 ಗುಂಟೆಯಷ್ಟು ಪ್ರದೇಶವನ್ನು ಗ್ರಾಮದ ಎ.ವಿ.ಉಮಾಪತಿ ಬಿನ್ ಶೇಷಾದ್ರಯ್ಯ ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ. ಒತ್ತುವರಿ ಜಾಗದ ಸುತ್ತಲೂ ತಂತಿ ಬೇಲಿ ನಿರ್ಮಿಸಲಾಗಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
‘ಒತ್ತುವರಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ತೆರವುಗೊಳಿಸುವಂತೆ ಕೋರಿ ಆಗುಂಬೆ ವಲಯ ಅರಣ್ಯಾಧಿಕಾರಿ ಮತ್ತು ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕ್ಷ್ಯಾಧಾರಗಳ ಸಮೇತ ದೂರು ನೀಡಲಾಗಿತ್ತು. ಆದರೆ, ಈವರೆಗೂ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ಒತ್ತುವರಿಯನ್ನು ತೆರವುಗೊಳಿಸಬೇಕು ಮತ್ತು ಒತ್ತುವರಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.