ADVERTISEMENT

ಓ.ಟಿ ಉಪಕರಣ ಖರೀದಿಯಲ್ಲಿ‌ ಅವ್ಯವಹಾರ ಆರೋಪ ನಿರಾಧಾರ: ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 11:39 IST
Last Updated 23 ಸೆಪ್ಟೆಂಬರ್ 2024, 11:39 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ಬಿಜೆಪಿಯವರದು ಆರೋಪ ಮಾಡುವುದು ಮತ್ತು ಅದನ್ನು ಸಾಬೀತುಪಡಿಸದೇ ಓಡಿ ಹೋಗುವ (ಹಿಟ್ ಅಂಡ್ ರನ್) ಪಾಲಿಸಿ ಅನುಸರಿಸುತ್ತಿದ್ದಾರೆ. ಆಪರೇಶನ್ ಥಿಯೇಟರ್ ಉಪಕರಣಗಳ ಖರೀದಿ ಅವ್ಯವಹಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಟೀಕೆ ಕುರಿತು ತಾಲ್ಲೂಕಿನ ಸುಲೇಪೇಟದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಥಿಯೇಟರ್‌ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಆರೋಪ ಶುದ್ಧ ಸುಳ್ಳು. ಬಿಜೆಪಿಯವರಿಗೆ ಅಧಿಕಾರದ ಹಪಾಹಪಿತನ ಹೆಚ್ಚಾಗಿದೆ. ಅವರು ದಿನಕ್ಕೊಂದು ನಾಟಕದ ಮೂಲಕ ರಾಜ್ಯ ಸರ್ಕಾರ ಮತ್ತು ಸಚಿವರಿಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ (ಕೆಟಿಪಿಪಿ) ಪ್ರಕಾರವೇ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಅವ್ಯವಹಾರಕ್ಕೆ ಅವಕಾಶವೇ ಇಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಬಿಜೆಪಿಯವರ ದುರುದ್ದೇಶ ಫಲಿಸುವುದಿಲ್ಲ’ ಎಂದರು.

ADVERTISEMENT

ಸುಳ್ಳು ಆರೋಪ ಮಾಡಿದರೆ ಮಾನಹಾನಿ ಮೊಕದ್ದಮೆ ದಾಖಲಿಸಬಹುದಲ್ಲವೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಹೀಗೆ ಮಾಡಿದರೆ ಪ್ರಜಾಪ್ರಭುತ್ವದಲ್ಲಿ ಇವರಿಗೆ ನಂಬಿಕೆಯಿಲ್ಲ. ವಿಪಕ್ಷಗಳ ನಾಯಕರನ್ನು ಮಾತನಾಡಲು ಬಿಡದೇ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಹೀಗಾಗಿ ಬಿಜೆಪಿಯವರು ತಮ್ಮ‌ ಹಳೆ ಚಾಳಿ ಮುಂದುವರಿಸಿದರೆ ಅವರ ವಿರುದ್ದ ಕಾನೂನು ಕ್ರಮಕ್ಕೆ ಪರಿಶೀಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳಿಗೆ ಟೆಂಡರ್ ಪ್ರಕ್ರಿಯೆಯ ಸಮಗ್ರ ದಾಖಲೆ ಕೊಡಲು ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಿಯೇ ಮಾಧ್ಯಮ ಗೋಷ್ಠಿ ನಡೆಸಿ ಆರೋಪಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದರು.

‘ರಾಜ್ಯಪಾಲರ ಮೂಲಕ ಸರ್ಕಾರವನ್ನು ಪ್ರಶ್ನಿಸಲಾಗುತ್ತಿದೆ. ಜತೆಗೆ ಅಡೆತಡೆ ಮಾಡಲಾಗುತ್ತಿದೆ. ಯಾರು ಏನೇ ತಿಪ್ಪರಲಾಗ ಹಾಕಿದರೂ ಬಡವರ ಪರವಾದ ಮತ್ತು ಅಭಿವೃದ್ಧಿ ಪರವಾದ ಕಾಂಗ್ರೆಸ್ ಸರ್ಕಾರದ ನಮ್ಮ‌ ನಿಲುವು ಬದಲಾಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ಜನರ ದೃಷ್ಟಿಯಲ್ಲಿ‌ ಕೆಟ್ಟ ಸರ್ಕಾರ ಎಂಬ ಹಣೆಪಟ್ಟಿ ಅಂಟಿಸಲು ಬಿಜೆಪಿ ಯತ್ನಿಸುತ್ತಿದೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ್ ಮಾಲಿ ಪಾಟೀಲ, ಹಿರಿಯ ಮುಖಂಡ ಬಸವರಾಜ ಪಾಟೀಲ ಊಡಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರಡ್ಡಿ ಪಾಟೀಲ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.