ADVERTISEMENT

ಖಾದರ್ ತಮ್ಮನಿಗೆ ಅರೆವೈದ್ಯಕೀಯ ಸೇವಾ ಪರಿಷತ್ತಿನ ಪಟ್ಟ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 15:53 IST
Last Updated 24 ಜುಲೈ 2024, 15:53 IST
   

ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಸೋದರ ಯು.ಟಿ.ಇಫ್ತಿಕಾರ್ ಫರೀದ್‌ ಅವರ ಅಧ್ಯಕ್ಷತೆಯಲ್ಲಿ, ರಾಜ್ಯ ಅರೆವೈದ್ಯಕೀಯ ಸೇವಾ ಪರಿಷತ್ತನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. 

ಅರೆವೈದ್ಯಕೀಯ ಸೇವೆ ಒದಗಿಸುವ ಸಹಾಯಕರು, ತಂತ್ರಜ್ಞರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೋಂದಣಿ ರಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಅರೆವೈದ್ಯಕೀಯ ಸೇವಾ ವೃತ್ತಿಪರರಿಗಾಗಿ ರಾಷ್ಟ್ರೀಯ ಆಯೋಗ ಕಾಯ್ದೆ’ಯನ್ನು 2021ರಲ್ಲಿ ಜಾರಿಗೆ ತಂದಿತ್ತು. ಕಾಯ್ದೆಯ ಅನ್ವಯ ಪ್ರತಿ ರಾಜ್ಯವೂ ಪರಿಷತ್ತನ್ನು ರಚಿಸಬೇಕಿತ್ತು.

ರಾಜ್ಯ ಸರ್ಕಾರವು ಈಗ ಎರಡು ವರ್ಷಗಳ ಅವಧಿಗೆ ಪರಿಷತ್ತನ್ನು ರಚನೆ ಮಾಡಿ, ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ಕಾಲೇಜ್‌ ಆಫ್‌ ಫಿಜಿಯೋಥೆರಪಿಯ ‍ಪ್ರಾಂಶುಪಾಲರಾಗಿರುವ ಫರೀದ್‌ ಅವರನ್ನು ಪರಿಷತ್ತಿನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ, ಕಲಬುರ್ಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ADVERTISEMENT

ಅರೆವೈದ್ಯಕೀಯ ಸೇವೆಗಳನ್ನು ಒದಗಿಸುವ ವೃತ್ತಿಪರರು, ವೃತ್ತಿಪರ ಸಂಸ್ಥೆಗಳು, ಸಂಬಂಧಿತ ವೃತ್ತಿಪರ ಕೋರ್ಸ್‌ಗಳನ್ನು ನೀಡುವ ಶೈಕ್ಷಣಿಕ ಸಂಸ್ಥೆಗಳ ನೋಂದಣಿ ಹಾಗೂ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯ ಅಧಿಕಾರವು ಪರಿಷತ್ತಿಗೆ ಇರಬೇಕು ಎಂದು ಕೇಂದ್ರ ಸರ್ಕಾರದ ಕಾಯ್ದೆ ಹೇಳುತ್ತದೆ. ಈ ಸಂಬಂಧ ಇನ್ನಷ್ಟೇ ನಿಯಮಾವಳಿಗಳು ರಚನೆಯಾಗಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.