ADVERTISEMENT

ಮುಡಾ ನಿವೇಶನಗಳ ಹಂಚಿಕೆ ಅಮಾನತು: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:06 IST
Last Updated 3 ಜುಲೈ 2024, 16:06 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ‘ಮುಡಾದಿಂದ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನೂ ಅಮಾನತ್ತಿನಲ್ಲಿಡಲಾಗಿದೆ. ಆದ್ದರಿಂದ ಸರ್ಕಾರಕ್ಕೆ ನಷ್ಟವಾಗಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ‘ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿರುವುದಕ್ಕೆ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ‘ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದೆ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ, ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ತೀರ್ಮಾನ ಈ ಬಗ್ಗೆ ಮಾಡಲಾಗುವುದು’ ಎಂದರು.

ADVERTISEMENT

‘ಆರ್. ಅಶೋಕ ಕರ್ತವ್ಯ ಲೋಪವೆಸಗಿದ್ದಾರೆ ಎಂದರೆ ಅವರು ರಾಜೀನಾಮೆ ಕೊಡುತ್ತಾರೆಯೇ? ಅವರ ಕಾಲದಲ್ಲಿ ಅಕ್ರಮ–ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜೀನಾಮೆ ಕೊಡಿ ಅಂದರೆ ಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ? ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು? ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ’ ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮಗಳ ಬಗ್ಗೆಯೂ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಿಗಮದ ಪ್ರಕರಣವನ್ನು ಎಸ್‍ಐಟಿಗೆ ವಹಿಸಲಾಗಿದ್ದು ತನಿಖೆ ನಡೆಯುತ್ತಿದೆ. ವರದಿ, ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಮೊದಲೇ ಹೇಗೆ ಕ್ರಮ ಕೈಗೊಳ್ಳುವುದು? ‘ಡೆತ್ ನೋಟ್‌’ನಲ್ಲಿ ಸಚಿವ ನಾಗೇಂದ್ರ ಅವರು ವ್ಯವಸ್ಥಾಪಕ ನಿರ್ದೇಶಕರಿಗೆ ಮೌಖಿಕ ಆದೇಶ ನೀಡಿದ್ದರು ಎಂದು ಬರೆದಿರುವ ಕಾರಣ ಸಚಿವರಿಂದ ರಾಜೀನಾಮೆ ಪಡೆದೆವು. ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.