ADVERTISEMENT

ಪ್ರತ್ಯೇಕ ಕಾಲೇಜು ಮಂಜೂರು ಮಾಡಿಸಿಕೊಳ್ಳಲಿ: ಡಿ.ಕೆ ಸಹೋದರರಿಗೆ ಎಚ್‌ಡಿಕೆ ಸವಾಲು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2023, 13:32 IST
Last Updated 27 ಆಗಸ್ಟ್ 2023, 13:32 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಚನ್ನಪಟ್ಟಣ (ರಾಮನಗರ): ‘ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುವ ಬದಲು, ಡಿ.ಕೆ. ಸಹೋದರರು ತಮ್ಮ ಕೈಯಲ್ಲಿರುವ ಅಧಿಕಾರ ಬಳಸಿಕೊಂಡು ಪ್ರತ್ಯೇಕ ಕಾಲೇಜು ಮಂಜೂರು ಮಾಡಿಸಿಕೊಳ್ಳಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ವೈದ್ಯಕೀಯ ಕಾಲೇಜು ಸಂಕೀರ್ಣ ಒಂದೇ ಕಡೆ ಇರಬೇಕು ಎಂಬ ದೂರದೃಷ್ಟಿಯಿಂದ ಎರಡನ್ನೂ ರಾಮನಗರ ಜಿಲ್ಲಾ ಕೇಂದ್ರಕ್ಕೆ ಮಂಜೂರು ಮಾಡಲಾಗಿತ್ತು. ಇದೀಗ, ಡಿ.ಕೆ. ಸಹೋದರರು ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿರುವುದು ಅವೈಜ್ಞಾನಿಕವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ವೈದ್ಯಕೀಯ ಸಚಿವರೂ ಆಗಿದ್ದ ಡಿ.ಕೆ. ಶಿವಕುಮಾರ್ ಅವರ ಒತ್ತಡದಿಂದಾಗಿ, ಕನಕಪುರಕ್ಕೆ ಪ್ರತ್ಯೇಕ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ₹100 ಕೋಟಿ ಕೊಟ್ಟೆ. ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಅದನ್ನು ಉಳಿಸಿಕೊಳ್ಳಲಾಗದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಟ್ಟು ಕೊಟ್ಟರು’ ಎಂದರು.

ADVERTISEMENT
ರಾಮನಗರ–ಚನ್ನಪಟ್ಟಣ ಒಂದಾಗುವ ದಿನಗಳು ಬರುತ್ತವೆ. ಹುಬ್ಬಳ್ಳಿ–ಧಾರವಾಡ ಇರುವಂತೆ ಇವು ಸಹ ಒಂದಾಗುತ್ತವೆ. ಮುಂದೊಂದು ದಿನ ಎರಡೂ ನಗರಗಳು ಸೇರಿ ಮಹಾನಗರ ಪಾಲಿಕೆಯಾಗುತ್ತವೆ ಎಂಬ ನಂಬಿಕೆ ಇದೆ..
ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್ ನಾಯಕ

‘ವಿಶ್ವವಿದ್ಯಾಲಯದ ಕ್ಯಾಂಪಸ್ ಒಂದು ಕಡೆ, ಕಾಲೇಜು ಮತ್ತೊಂದು ಕಡೆ ಇದ್ದರೆ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುತ್ತಿದೆ. ಎರಡೂ ಒಂದೇ ಕಡೆ, ಅದರಲ್ಲೂ ಜಿಲ್ಲಾ ಕೇಂದ್ರದಲ್ಲೇ ಇರಬೇಕು. ಎಂಜಿನಿಯರಿಂಗ್ ಕಾಲೇಜುಗಳನ್ನು ಇದೇ ರೀತಿ ಎಲ್ಲೆಂದರಲ್ಲಿ ನಿರ್ಮಾಣ ಮಾಡಿದ್ದರಿಂದ, ವಿದ್ಯಾರ್ಥಿಗಳಿಲ್ಲದೆ ಬಳಲುತ್ತಿವೆ. ಬೇಕಾದಲ್ಲಿ ಕಾಲೇಜು ಸ್ಥಾಪಿಸಿದರೆ, ವೈದ್ಯಕೀಯ ಕಾಲೇಜುಗಳಿಗೂ ಮುಂದೆ ಅದೇ ಸ್ಥಿತಿ ಬರಲಿದೆ’ ಎಂದು ಹೇಳಿದರು.

‘ಕಾಲೇಜಿಗಾಗಿ ರಾಮನಗರದ ಸಾರ್ವಜನಿಕರು ಹಾಗೂ ಸಂಘ–ಸಂಸ್ಥೆಗಳು ಸೇರಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಅವರು ಏನು ಮಾಡುತ್ತಾರೊ ಮಾಡಲಿ. ನಾನು ಏನು ಮಾಡಬೇಕೊ ಮಾಡುವೆ. ಮುಂದಿನ ಬಜೆಟ್‌ನಲ್ಲಿ ಮತ್ತೊಂದು ಕಾಲೇಜು ತರುತ್ತೇವೆ ಎಂದು ಜನರನ್ನು ನಂಬಿಸಲು ಯತ್ನಿಸುತ್ತಿದ್ದಾರೆ. ಒಂದು ವೇಳೆ ಬಜೆಟ್ ಮಂಡನೆಯಾಗದಿದ್ದರೆ, ಆಗ ಏನು ಮಾಡತ್ತಾರೆ?’ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ಹೋರಾಟ ಮಾಡಿದ್ದರು

‘ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜು, ಮೆಗಾ ಡೇರಿ ಹಾಗೂ ರೇಷ್ಮೆ ಮಾರುಕಟ್ಟೆಯನ್ನು ತರಲಾಯಿತು. ರಾಮನಗರದಲ್ಲಿ ₹145 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಮಾಡಬೇಕಿತ್ತು. ಇಲ್ಲಿ ಜಾಗದ ಕೊರತೆಯಿಂದಾಗಿ ರಾಮನಗರ– ಚನ್ನಪಟ್ಟಣದ ಮಧ್ಯೆ ಇರುವ ರೇಷ್ಮೆ ಇಲಾಖೆಯ ಜಾಗದಲ್ಲಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ. ಆದರೆ, ಮಾರುಕಟ್ಟೆಯನ್ನು ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋದೆ ಎಂದು ನನ್ನ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡಿದರು. ನನಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಒಂದೇ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.