ಬೆಂಗಳೂರು: ‘ದೆಹಲಿಯ ಎರಡೂ ಪಕ್ಷಗಳು ಕನ್ನಡಿಗರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಕನ್ನಡಿಗರ ಹಿತಾಸಕ್ತಿ ರಕ್ಷಣೆಗೆ ಇಲ್ಲಿಯದ್ದೇ, ಪರ್ಯಾಯ ರಾಜಕೀಯ ಮತ್ತು ರಾಜಕೀಯ ಪಕ್ಷವೊಂದರ ಅವಶ್ಯಕತೆ ಇದೆ’ ಎಂದು ಹಿರಿಯ ರಾಜಕಾರಣಿ ಸಿ.ಎಂ.ಇಬ್ರಾಹಿಂ ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಆಯೋಜಿಸಿದ್ದ ಸಭೆಯಲ್ಲಿ, ‘ಕರ್ನಾಟಕ ಮುಂದೇನು?: ರಾಜಕೀಯ ಚಿಂತನಾ ಸಭೆ’ಯಲ್ಲಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಸಮತಾ ಸೈನಿಕ ದಳ ಸೇರಿ 10ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಉದ್ದೇಶ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ‘ರಾಜ್ಯ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಭ್ರಷ್ಟಾಚಾರವನ್ನು ಖಂಡಿಸದೆ ಇದ್ದರೆ, ನಾವೂ ಅದನ್ನು ಬೆಂಬಲಿಸಿದಂತೆ ಆಗುತ್ತದೆ. ಬಿಜೆಪಿ ಕೋಮುವಾದಿ, ಕಾಂಗ್ರೆಸ್ ಭ್ರಷ್ಟಾಚಾರಿ ಮತ್ತು ಜೆಡಿಎಸ್ ಜಾತಿವಾದಿ. ಹೀಗಾಗಿ ಪರ್ಯಾಯ ರಾಜಕೀಯ ಪಕ್ಷ ಕಟ್ಟಲೇಬೇಕಾದ ಸ್ಥಿತಿ ಬಂದೊದಗಿದೆ’ ಎಂದರು.
‘ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರನ್ನು ಒಂದೇ ರೀತಿ ನಡೆಸಿಕೊಳ್ಳುತ್ತಿವೆ. ಜೆಡಿಎಸ್ ಸಹ ಅದೇ ರೀತಿ ನಡೆದುಕೊಳ್ಳುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕನ್ನಡಿಗರ ಹಿತಾಸಕ್ತಿ ರಕ್ಷಣೆಗಾಗಿ ಪರ್ಯಾಯ ರಾಜಕಾರಣವನ್ನು ಹುಟ್ಟುಹಾಕಬೇಕು. 2028ರ ಚುನಾವಣೆ ವೇಳೆಗೆ ಸರ್ಕಾರ ರಚಿಸುವ ಗುರಿ ಹಾಕಿಕೊಳ್ಳಬೇಕು’ ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಸಭೆಯ ನಿರ್ಧಾರ ಕುರಿತು ಮಾತನಾಡಿದ ಇಬ್ರಾಹಿಂ, ‘ಈ ಸಂಬಂಧ ಹುಬ್ಬಳ್ಳಿ, ಕಲಬುರ್ಗಿ, ಮೈಸೂರು ಸೇರಿ ರಾಜ್ಯದ ಎಲ್ಲ ಪ್ರಾಂತ್ಯಗಳಲ್ಲಿ ಸಾಲು–ಸಾಲು ಸಭೆಗಳನ್ನು ನಡೆಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.