ADVERTISEMENT

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು
ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು   

ಮೂಡುಬಿದಿರೆ (ದಕ್ಷಿಣ ಕನ್ನಡ): ಇಲ್ಲಿನ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿಗೆ 6ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯಕ್ಕೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 13,617 ವಿದ್ಯಾರ್ಥಿಗಳು ಹಾಜರಾದರು.

ಒಟ್ಟು 250 ಸೀಟುಗಳಿಗೆ 14,158 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 6ನೇ ತರಗತಿಗೆ 9,357, 7ನೇ ತರಗತಿಗೆ 1,553, 8ನೇ ತರಗತಿಗೆ 1,964 ಹಾಗೂ 9ನೇ ತರಗತಿಗೆ 743 ವಿದ್ಯಾರ್ಥಿಗಳು ‌ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 4,941 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 2,210 ಹಾಗೂ 1,255 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಪ್ರವೇಶ ಪರೀಕ್ಷೆಯು ವಿದ್ಯಾರ್ಥಿಗಳು ಪ್ರಸ್ತುತ ಓದುತ್ತಿರುವ ಪಠ್ಯ ವಿಷಯ ಹಾಗೂ ತಾರ್ಕಿಕ ಸಾಮರ್ಥ್ಯ ಆಧಾರಿತ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿತ್ತು. ಪರೀಕ್ಷೆಯಲ್ಲಿ ನಕಲು ತಡೆಗಟ್ಟುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ರೀತಿಯಲ್ಲೇ ಎ, ಬಿ, ಸಿ, ಡಿ ಸೀರಿಸ್‌ನಲ್ಲಿ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್ ಒದಗಿಸಲಾಗಿತ್ತು.

ADVERTISEMENT

ಆಳ್ವಾಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿದಂತೆ 26,000ಕ್ಕೂ ಅಧಿಕ ಮಂದಿ ಸೇರಿದ್ದರು. ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

‘ಸತತ 6 ವರ್ಷಗಳಿಂದ ರಾಜ್ಯದಲ್ಲಿರುವ 15,000ಕ್ಕೂ ಅಧಿಕ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಶಾಲಾ ವಿಶ್ಲೇಷಣೆ ಮತ್ತು ಮೌಲ್ಯಾಂಕನದಲ್ಲಿ ನಂ. 1 ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕನ್ನಡ ಮಾಧ್ಯಮ ಶಾಲೆಯನ್ನು ಹೇಗೆ ಕಟ್ಟಬೇಕು ಎಂಬುದಕ್ಕೆ ನಮ್ಮ ಸಂಸ್ಥೆ ಮಾದರಿಯಾಗಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.