ಬೆಂಗಳೂರು:ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅಂಬರೀಷ್ ಅವರ ನಿಧನ ಎಲ್ಲರ ಮನದಲ್ಲಿ ನೋವುಂಟು ಮಾಡಿದೆ. ಕಂಬನಿ ಮಿಡಿಯುವಂತೆ ಮಾಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಅವರ ಒಡನಾಡಿಗಳು ತಾವು ಕಂಡಂತೆ ಅಂಬಿಯ ಕರಿತು ತಮ್ಮದೇ ಭಾವನೆಗಳಲ್ಲಿನುಡಿನಮನ ಸಲ್ಲಿಸಿದ್ದಾರೆ.
ಡೈನಮಿಕ್ ವ್ಯಕ್ತಿ ಇಲ್ಲವಾಗಿದ್ದು ದುಃಖದ ಸಂಗತಿ
‘ಡೈನಮಿಕ್ ವ್ಯಕ್ತಿ ಚಿತ್ರರಂಗದಲ್ಲಿ ಇಲ್ಲವಾಗಿರುವುದು ತುಂಬಾ ದುಃಖದ ಸಂಗತಿ. ಕಳೆದ ವಾರವಷ್ಟೇ ಮೈಸೂರಿನಲ್ಲಿ ಭೇಟಿ ಮಾಡಿದ್ದೆ. ಅವರ ಪುತ್ರ ಅಭಿನಯಿಸುತ್ತಿರುವ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಹಾಗಾಗಿ, ‘ಹೆಂಗಿದ್ದಾನೆ ನನ್ನ ಮಗ’ ಎಂದು ಅಂಬರೀಷ್ ತಮ್ಮ ಮಗನ ಅಭಿನಯದ ಬಗ್ಗೆ ಕಾಳಜಿಯಿಂದ ಕೇಳಿದ್ದರು’
–ನಟಿ ಸುಧಾರಾಣಿ
ತಬ್ಬಲಿಯಾಗುತ್ತಿರುವುದು ಚಿತ್ರರಂಗ ಮಾತ್ರವಲ್ಲ
‘ಅಂಬರೀಷ್ ಪುಟ್ಟಣ್ಣ ಕಣಗಾಲ್ ಅವರ ಆಪ್ತರಾಗಿದ್ದರು. ನೇರ ಮಾತಿನ ಹೃದಯವಂತ. ಅವರ ನಿಧನದಿಂದ ತಬ್ಬಲಿಯಾಗುತ್ತಿರುವುದು ಚಿತ್ರರಂಗ ಮಾತ್ರವಲ್ಲ, ಕನ್ನಡದ ಸಾಂಸ್ಕೃತಿಕ ರಂಗ ತಬ್ಬಲಿಯಾಗುತ್ತಿದೆ. ಒಬ್ಬ ಮೇರು ಕಲಾವಿದ, ಸಾಂಸ್ಕೃತಿಕ ಕಲಾವಿದನ್ನು ಕಳೆದುಕೊಂಡಿದ್ದೇವೆ. ಕುಟುಂಬಕ್ಕೆ ಶೋಕವನ್ನು ತಡೆದುಕೊಳ್ಳುವ ಶಕ್ತಿ ಬರಲಿ’
–ನಿರ್ದೇಶಕ ಟಿ.ಎನ್. ಸೀತಾರಾಮ್
ನನ್ನ ಮದುವೆ ದಿನ ಅವರಿಗೆ ಪುತ್ರ ಜನಿಸಿದ್ದ
‘ನನ್ನ ಮದುವೆ ದಿನ ಅಂಬರೀಷ್ ಅವರಿಗೆ ಪುತ್ರ ಜನಿಸಿದ್ದಾರೆ ಎಂಬ ಸುದ್ದಿ ಬಂದಿತ್ತು. ಅವರು ಎಂದೂ ಯಾರಿಗೂ ಕೆಟ್ಟ ಮಾತು ಆಡಿದ್ದನ್ನು ಕೇಳಿಲ್ಲ. ಬಡವರಿಗೆ ಕೊಡುವುದಲ್ಲಿ ಅವರ ಕೈ ಮುಂದು’
–ಅಶೋಕ್ ಖೇಣಿ
ಸ್ನೇಹ ಜೀವಿ
ಅಂಬರೀಶ್ ಅವರದು ಸ್ನೇಹಕ್ಕೆ ಮಾರುಹೋಗುವ ಜೀವ. ಹುಲಿ ಗುಣ ಹುಲಿಯಲ್ಲಿರುತ್ತದೆ. ಸಿಂಹದ ಗುಣ ಸಿಂಹದಲ್ಲಿರುತ್ತವೆ. ಅವು ರೂಪದಲ್ಲಿಯೇ ಭಯ ಹುಟ್ಟಿಸುವ ಹಾಗಿರುತ್ತದೆ. ಆದರೆ ಒಂದಿಷ್ಟು ದೂರದಿಂದ ನೋಡಿದಾಗ ಅವುಗಳ ಸೌಂದರ್ಯವೂ ಕಾಣುತ್ತದೆ. ಅಂಬರೀಶ್ ಅಂಥ ಸೌಂದರ್ಯವನ್ನು ತನ್ನೊಳಗಿಟ್ಟುಕೊಂಡಿದ್ದ ಸ್ನೇಹಜೀವಿ. ಅವರು ನಟಿಸಿದ ಪಾತ್ರಗಳೂ ಅಷ್ಟೇ ಸಜ್ಜನಿಕೆಯದಾಗಿದ್ದವು. - ಶಿವರಾಂ, ಹಿರಿಯ ನಟ
ಮಾತು ಕಠಿಣ; ಮಲ್ಲಿಗೆ ಹೂವಿನಂತ ಹೃದಯವಂತ
‘ಸಿನಿಮಾ, ರಾಜಕೀಯ ರಂಗದಲ್ಲಿ ಜಯ ಕಂಡ ಗೆಳೆಯ ಅಂಬರೀಷ್. 30 ವರ್ಷಗಳ ಗೆಳೆತನ ನಮ್ಮದು. ಮಾತು ಕಠಿಣವಾದರೂ ಮಲ್ಲಿಗೆ ಹೂವಿನಂತ ಹೃದಯವಂತ ಅಂಬರೀಷ್. ಕನ್ನಡ ಜನರ ಮನ ಗೆದ್ದ ವ್ಯಕ್ತಿ, ವಿಶೇಷವಾಗಿ ಮಂಡ್ಯ, ಮೈಸೂರು ಜನರ ಮನೆ ಮಗನಾಗಿದ್ದ ಗೆಳೆಯ. ಅಂಬರೀಷ್‌ಗೆ ಅಂಬರೀಷ್‌ಗೆ ಅವರೇ ಸಾಟಿ. ಅವರ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ. ಅವರ ಪುತ್ರ ಅಭಿಷೇಕ್ ಗೌಡ ಅವರಲ್ಲಿ ಮುಂದಿನ ದಿನಗಳಲ್ಲಿ ಅಂಬರೀಷ್ ಅವರನ್ನು ಕಾಣುವಂತಾಗಲಿ’
– ಬಸವರಾಜ ಬೊಮ್ಮಾಯಿ. ಶಾಸಕ
ರಾಜ್, ವಿಷ್ಣು, ಅಂಬಿ ಬ್ರಹ್ಮ, ವಿಷ್ಣು, ಮಹೇಶ್ವರರಂತೆ
‘ಅಂಬರೀಷ್ ಸೆಟ್‌ನಲ್ಲಿ ಮಗುವಿನಂತಿರುತ್ತಿದ್ದರು. ಪ್ರೀತಿ ವಿಶ್ವಾಸ ಅಭಿಮಾನದ ವ್ಯಕ್ತಿ. ಸಹ ಕಲಾವಿದರನ್ನು ಅತ್ಯಂತ ಸ್ನೇಹದಿಂದ ನೋಡುತ್ತಿದ್ದರು. ಅವರು ಬಹಳ ಕಾಲದವರೆಗೆ ಸಂಸಾರಿಯಾಗಲಿಲ್ಲ. ಸಂಸಾರಿಯಾಗುವಂತೆ ನಾವೆಲ್ಲಾ ಒತ್ತಾಯವನ್ನೂ ಮಾಡಿದ್ದೆವು. ಎಲ್ಲಾ ವಿಷಯದಲ್ಲಿ ಮೇರು ಪರ್ವತವೇರಿದ್ದಾರೆ. ರಾಜನ ಪಾತ್ರವಲ್ಲ, ಯಾವುದೇ ಕಸಗುಡಿಸುವ ಪಾತ್ರವೇ ಇರಲಿ ಮಾಡುತ್ತೇನೆ ಎನ್ನುತ್ತಿದ್ದ ವ್ಯಕ್ತಿ. ಸ್ನೇಹ ಏನೆಂಬುದನ್ನು ಅವರನ್ನು ನೋಡಿ ಕಲಿಯ ಬೇಕು. ಬ್ರಹ್ಮ, ವಿಷ್ಣು, ಮಹೇಶ್ವರ ರಾಗಿದ್ದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಈ ಮೂವರನ್ನೂ ಕಳೆದುಕೊಂಡಿದ್ದೇವೆ. ಯಾರಿಗೇ ಕಷ್ಟ ಬಂದರೂ ಅಂಬರೀಷ್ ಅವರನ್ನು ಭೇಟಿ ಮಾಡುತ್ತಿದ್ದೆವು. ಅವರು ಇಲ್ಲವಾಗಿರುವುದು ನೋವಿನ ಸಂಗತಿ’
–ನಿರ್ದೇಶಕ ಸಾಯಿಪ್ರಕಾಶ್
ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ
‘ಇಂಥಹ ವ್ಯಕ್ತಿಯನ್ನು ಯಾರಾದರು ಮರೆಯಲು ಸಾಧ್ಯವೇ’ ಎಂದು ಕಣ್ಣೀರಿಟ್ಟ ಹಿರಿಯ ನಟಿ ಲೀಲಾವತಿ, ತಾಯಿ–ಮಗನ ಪಾತ್ರದಲ್ಲಿ ಅಭಿನಯ ಮತ್ತು ಮೈಸೂರಿಗೆ ಪ್ರಯಾಣಿಸು ಸಂಗತಿಗಳನ್ನು ಸ್ಮರಿಸಿದರು. ‘ತುಂಬು ಹೃದಯದ ನಿಷ್ಕಲ್ಮಷ ವ್ಯಕ್ತಿ ಅವರು. ಒಳ್ಳೆಯವರು ಇಲ್ಲವಾಗಿರುವುದು ನೋವಿನ ಸಂಗತಿ’ ಎಂದರು.
* ‘ಹೆಸರಾಂತ ಕಲಾವಿದನನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ’
–ಸಾ.ರಾ. ಗೋವಿಂದು
ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ಬಿಸಾಕಿದರು
‘ಅಂಬರೀಷ್ ಕಳೆದುಕೊಂಡು ನಾಡು ಬಡವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕ್ಷಣ ತಡ ಮಾಡದೆ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿದ ವ್ಯಕ್ತಿ, ವಿಷ್ಣು ನಂತರ ಒಬ್ಬ ಉತ್ತಮ ಕಲಾವಿದನ್ನು ಕಳೆದುಕೊಂಡು ನಾಡು ಬಡವಾಗಿದೆ. ಇತಹ ಕಲಾವಿದ ಮತ್ತೊಮ್ಮೆ ಹುಟ್ಟಿ ಬರಲಿ. ಅವರು ಇಲ್ಲವಾಗಿರುವುದನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ’
– ಬಿ.ಎಸ್.ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಚಿತ್ರರಂಗ, ನಾಡಿಗೆ ನಷ್ಟ
‘ಅವರ ಸಾವು ರಾಜ್ಯದಲ್ಲಿ ದುಃಖ ಉಂಟು ಮಾಡಿದೆ. ವೈಯಕ್ತಿಕವಾಗಿ ನೋವು ತಂದಿದೆ. 40 ವರ್ಷ ಒಡನಾಡಿಯಾಗಿದ್ದೆವು. ಸ್ನೇಹಜೀವಿ, ರಾಜಕೀಯವಾಗಿ ಅವರೊಟ್ಟಿಗೆ ಕೆಲಸ ಮಾಡಿದ್ದೇವೆ. ಸಿನಿಮಾ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅವರಿತ ಕೊಡುಗೆ ನೀಡಿದ್ದಾರೆ. ಶ್ರೇಷ್ಟ ನಟ, ಉತ್ತಮ ಗುಣಗಳನ್ನು ಹೊಂದಿದ್ದ ವ್ಯಕ್ತಿ. ಅವರು ಇಲ್ಲವಾಗಿರುವುದು ಚಿತ್ರರಂಗ ಮತ್ತು ನಾಡಿಗೆ ಅಪಾರ ನಷ್ಟವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಲಭಿಸಲಿ’
–ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ
* ‘ನನ್ನನ್ನು ಮೇಲೆತ್ತಿ ತಾನೂ ಮೇಲೆ ಬಂದ ಕಲಾವಿದ. ಕಲಾವಿದ ಎನ್ನುವುದಕ್ಕಿಂತ ಅತ್ಯುತ್ತಮ ವ್ಯಕ್ತಿ ಎನ್ನಬಹುದು. ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ಅಂಬಿ, ಅಂಬಿ, ಅಂಬಿ...
–ನಟ ಶ್ರೀನಾಥ್
*‘ಅಂಬರೀಷ್ ಅವರು ನಮ್ಮಿಂದ ದೂರವಾಗಿಲ್ಲ. ಕಲಾವಿದರಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ‘
–ನಟ ಶಿವರಾಜ್‌ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.