ADVERTISEMENT

ಅಂಬಿ: ‘ತೆರೆದ ಪುಸ್ತಕ’ಕ್ಕೆ ಉದಾಹರಣೆ

ದೀಪಕ್ ತಿಮ್ಮಯ
Published 26 ನವೆಂಬರ್ 2018, 1:45 IST
Last Updated 26 ನವೆಂಬರ್ 2018, 1:45 IST
   

ಅಂಬರೀಷ್ ಅವರನ್ನು ‘ಜೇಡರಬಲೆ’ಯಲ್ಲಿ ಸಂದರ್ಶನ ಮಾಡಬೇಕು ಅನ್ನುವ ಆಸೆ ನನಗೆ ಬಹಳ ದಿನಗಳಿಂದ ಇತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಏನು ಹೇಳುತ್ತಾರೋ, ನನ್ನನ್ನು ಹೇಗೆ ನನ್ನ ಬಲೆಯಲ್ಲೇ ಕೆಡವಿಬಿಡುತ್ತಾರೋ ಎಂಬ ಆತಂಕವೂ ಇತ್ತು. ನನ್ನ ಟಿ.ವಿ. ಸಂದರ್ಶನ ಕಾರ್ಯಕ್ರಮಗಳ ಆರಂಭದ ದಿನದಲ್ಲೇ ಅಂಬರೀಷ್ ಅವರನ್ನು ಭೇಟಿಯಾಗಿದ್ದಾಗ, ‘ಕಾರ್ಯಕ್ರಮದಲ್ಲಿ ಭಾಗವಹಿಸಿ’ ಎಂದು ಅವರನ್ನು ಆಹ್ವಾನಿಸಿದ್ದೆ.

‘ಬೇಡಪ್ಪ, ಅಲ್ಲಿ ಬಂದು ಏನೇನೋ ಕೇಳಿ ನಾನು ಇನ್ನೇನೋ ಹೇಳಿ ಏನೇನೋ ಆಗಿಬಿಟ್ಟರೆ’ ಅಂತ ಹೇಳಿದ್ದರು. ಅದಾದ ಕೆಲವು ವರ್ಷಗಳ ನಂತರ ಅವರು ‘ಆಯ್ತು ನಿಮ್ಮ ಕಾರ್ಯಕ್ರಮಕ್ಕೆ ನಾನು ಬರ್ತೀನಿ, ಏನು ಬೇಕಾದ್ರೂ ಕೇಳಿ, ಆದ್ರೆ ನಾನು ಹೇಳೋದನ್ನೆಲ್ಲ ಹಾಗೇ ತೋರಿಸ್ಬೇಕು, ಎಡಿಟ್ ಗಿಡಿಟ್ ಮಾಡಬಾರ್ದು’ ಅಂತ ಹೇಳಿದರು. ಅದು ನನ್ನನ್ನು ಚಿಂತೆಗೆ ದೂಡಿದ್ದಂತೂ ನಿಜ. ಅವರು ಯಾರ ಬಗ್ಗೆ ಏನು ಹೇಳಲಿಕ್ಕೂ ಅಂಜುವವರಲ್ಲ, ಆ ವಿಚಾರದಲ್ಲಿ ಅವರು ಅಂಜದ ಗಂಡು. ಆದರೆ ಅದನ್ನೆಲ್ಲ ಹಾಕಲಿಕ್ಕೆ ನಾವು ತಯಾರಿರಬೇಕಲ್ಲ.

ಅವರು ನನ್ನ ಟಿವಿ ಕಾರ್ಯಕ್ರಮಗಳನ್ನು ಯಾವಾಗ ನೋಡುತ್ತಿದ್ದರೋ ಗೊತ್ತಿಲ್ಲ. ಆದರೆ ಅವರಿಗೆ ನನ್ನ ಅನೇಕ ಕಾರ್ಯಕ್ರಮಗಳ ಬಗ್ಗೆ ಗೊತ್ತಿತ್ತು. ಅವರನ್ನು ನಾನು ಕಾರ್ಯನಿಮಿತ್ತ ಭೇಟಿಯಾಗಿದ್ದು ಕಡಿಮೆ. ಭೇಟಿಯಾದಾಗಲೆಲ್ಲ ಅವರು ಒಂದು ಮಾಹಿತಿಯ ಸಾಗರವಾಗಿ ಕಂಡುಬರುತ್ತಿದ್ದರು.

ADVERTISEMENT

ಅವರಿಗೆ ಅನೇಕ ವಿಚಾರಗಳಲ್ಲಿ ಅಗಾಧ ಮಾಹಿತಿ ಇತ್ತು. ಅವರಿಗೆ ಗೊತ್ತಿಲ್ಲದ ಯಾವುದೇ ಪ್ರಮುಖ ವ್ಯಕ್ತಿ ಇರಲಿಲ್ಲ. ಸಿನಿಮಾ, ರಾಜಕೀಯ, ಉದ್ಯಮ, ಕಾನೂನು, ಕೃಷಿ, ಆರ್ಥಿಕ ವಿಚಾರ, ಹೀಗೆ ಅವರಿಗೆ ಅನೇಕ ಕ್ಷೇತ್ರಗಳ ಬಗ್ಗೆ ಬಹಳಷ್ಟು ಗೊತ್ತಿತ್ತು. ಯಾವತ್ತೂ ‘ನನಗೆ ಗೊತ್ತು ನಿನಗೆ ಗೊತ್ತಿಲ್ಲ’ ಎನ್ನುವ ಧಾಟಿ ಅವರದ್ದಾಗಿರಲಿಲ್ಲ. ತಮ್ಮ ದೌರ್ಬಲ್ಯ, ನ್ಯೂನ್ಯತೆಗಳನ್ನು, ತಾವು ಮಾಡಿದ ತಪ್ಪುಗಳನ್ನು ನಿಸ್ಸಂಕೋಚವಾಗಿ ಹೇಳುತ್ತಿದ್ದರು.

ಕುಡಿಯುವುದು ಅಥವಾ ಸಿಗರೇಟ್ ಸೇದುವುದು ಅಂಥ ಸಾಧನೆಯ ವಿಚಾರವೆಂದು ಅವರು ಹೇಳಿಕೊಳ್ಳುತ್ತಿರಲಿಲ್ಲವಾದರೂ ದುಡ್ಡಿದ್ದರೂ ದುಡ್ಡಿಲ್ಲದಿದ್ದರೂ ದಿನಕ್ಕೊಂದು ‘ಬ್ಲ್ಯಾಕ್ ಲೇಬಲ್’ ರೆಡಿ ಮಾಡಿಕೊಳ್ಳುತ್ತಿದ್ದುದಾಗಿ ಮಾತ್ರ ಪ್ರಾಮಾಣಿಕವಾಗಿ ಹೇಳಿಕೊಳ್ಳುತ್ತಿದ್ದರು. ‘ನೀವು ವಿಸ್ಕಿ ಬಿಟ್ಟರೆ ಬೇರೆ ಏನೂ ಕುಡಿಯೋದಿಲ್ವಾ’ ಅಂತ ಕೇಳಿದರೆ ‘ಬಹಳ ವರ್ಷಗಳ ಹಿಂದೆ, ರೆಡ್ ವೈನ್ ಕುಡಿದರೆ ಬೆಳ್ಳಗಾಗ್ತಾರೆ ಅಂತ ಯಾರೋ ಹೇಳಿದ್ದಕ್ಕೆ ಅನೇಕ ವರ್ಷ ರೆಡ್ ವೈನ್ ಕುಡಿದಿದ್ದೇನೆ. ಬೆಳ್ಳಗೂ ಆಗಿಲ್ಲ ಏನೂ ಆಗಿಲ್ಲ’ ಅಂತ ಚಟಾಕಿ ಹಾರಿಸಿದ್ದರು. ಯಾವುದರ ಬಗ್ಗೆಯೇ ಆಗಲಿ, ಯಾರ ಬಗ್ಗೆಯೇ ಆಗಲಿ ಅವರು ಗುಸು ಗುಸು ಪಿಸು ಪಿಸು ಎಂದು ತಮ್ಮ ಅಭಿಪ್ರಾಯ ಸೂಚಿಸುತ್ತಿರಲಿಲ್ಲ.

ನಾನು ವಿಷ್ಣುವರ್ಧನ್ ಅವರಿಗೆ ಆಪ್ತನಾಗಿದ್ದೆ ಎಂದು ಅವರಿಗೆ ತಿಳಿದಿತ್ತು. ಮೈಸೂರಿನಲ್ಲಿ ಒಂದು ಕಾರ್ಯಕ್ರಮಕ್ಕೆ ವಿಷ್ಣು ಅವರನ್ನು ಆಹ್ವಾನಿಸಿದ್ದಾಗ ಆ ಕಾರ್ಯಕ್ರಮದ ಬಗ್ಗೆ ಸ್ವಲ್ಪ ವಿವಾದವಿದ್ದ ಕಾರಣ ಅವರು ವ್ಯತಿರಿಕ್ತ ಮಾಧ್ಯಮ ಪ್ರತಿಕ್ರಿಯೆ ಬರಬಹುದು ಎಂದು ಆ ಕಾರ್ಯಕ್ರಮಕ್ಕೆ ಬರಲಿಲ್ಲ. ನನಗೆ ವಿಷ್ಣು ಅವರ ಬಗ್ಗೆ ಆ ವಿಚಾರದಲ್ಲಿ ಬೇಸರವಾಗಿತ್ತು.

ನಾನು ಆ ವಿಚಾರವನ್ನು ಅಂಬರೀಷ್ ಅವರಿಗೆ ಹೇಳಿದೆ. ಅವರು ಅದಕ್ಕೆ ‘ಹೌದು ಉದ್ದೇಶವಿಲ್ಲದಿದ್ದರೂ ಕೆಲವು ಸಲ ಹಾಗೆ ಮಾಡಿ ಬಿಡುತ್ತಾನೆ. ನೀವು ಅವನನ್ನ ಯಾಕೆ ಕರೀಲಿಕ್ಕೆ ಹೋದ್ರಿ? ನಾನು ನಿಜವಾಗಿ ಮೈಸೂರಿನವನು. ನನ್ನ ಯಾಕೆ ಕರೀಲಿಲ್ಲ? ಹಾಗೇ ಆಗಬೇಕು’ ಎಂದುಬಿಟ್ಟರು. ಹಾಗೇ ‘ಅದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ವಿಷ್ಣು ಬೇಕು ಅಂತ ಹಾಗೆ ಮಾಡಿರಲ್ಲ’ ಅಂತ ನನಗೆ ಸಮಾಧಾನ ಹೇಳಿ ಮನಸ್ಸು ಬದಲಾಯಿಸಿಬಿಟ್ಟರು.

ದಶಕಗಳ ಹಿಂದೆ ವೈಟ್ ಫೀಲ್ಡ್ ಹತ್ತಿರ ಸುಮಾರು ಏಳು ಎಕರೆ ಭೂಮಿಯನ್ನು ಕಡಿಮೆ ದುಡ್ಡಿಗೆ ಕೊಂಡುಕೊಂಡ ಮೇಲೆ ಇನ್ನೇನು ಅದನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಆ ಭೂಮಿಯ ಮಾಲೀಕ ಬಂದು ಇನ್ಯಾರೋ ಹೆಚ್ಚು ಹಣ ಕೊಟ್ಟು ಖರೀದಿ ಮಾಡಲು ಬಂದಿದ್ದಾರೆ, ಬಿಟ್ಟುಕೊಡಿ ಅಂದರಂತೆ. ‘ಅದ್ಹೇಗೆ ಆಗುತ್ತೆ? ಎಲ್ಲ ಒಪ್ಪಿಕೊಂಡು ಆಯ್ತಲ್ಲ? ವಾಪಸ್ ಕೊಡೋದು ಹೇಗೆ’ ಅಂದಾಗ, ‘ಇಲ್ಲ ನಮಗೆ ಹಣದ ಅವಶ್ಯಕತೆ ಇದೆ. ದಯವಿಟ್ಟು ಒಪ್ಪಿಕೊಳ್ಳಿ’ ಎಂದು ಆ ಭೂಮಾಲೀಕ ಹೇಳಿದರಂತೆ. ಮುಂದೊಂದು ದಿನ ಆ ಭೂಮಿಗೆ ನೂರಾರು ಕೋಟಿ ರೂಪಾಯಿ ಬೆಲೆಬಂದು, ಒಂದು ಒಳ್ಳೆಯ ಆಸ್ತಿಯಾಗಬಹುದು ಎಂಬುದು ಗೊತ್ತಿದ್ದೂ ಅದನ್ನು ವಾಪಸ್ ಕೊಟ್ಟರಂತೆ.

ತಮ್ಮ ಒಳ್ಳೆಯ ಗುಣವನ್ನು ಅನೇಕ ಮಂದಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅಂಬರೀಷ್ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅದರ ಬಗ್ಗೆ ಒಂದಷ್ಟು ಅಸಮಾಧಾನವೂ ಇತ್ತು. ಆ ಕಾರಣದಿಂದಲೇ ಅವರು ತಮ್ಮ ಒರಟುತನದ ಮೂಲಕ ಒಂದು ಕವಚ ಕಟ್ಟಿಕೊಂಡಿದ್ದರು. ಅಷ್ಟೊಂದು ಪ್ರಭಾವಿಗಳ, ಹಣವಂತರ, ಅಧಿಕಾರಸ್ಥರ ಸ್ನೇಹವಿದ್ದರೂ ಅವರಿಗೆ ವೈಯಕ್ತಿಕವಾಗಿ ಲಾಭವಾಗಿದ್ದು ಕಡಿಮೆ. ಅವರ ದಾನಶೂರತ್ವ ಮತ್ತು ಖರ್ಚುವೀರತ್ವದ ಬಗ್ಗೆ ಅರಿತಿದ್ದ ಅವರ ಕೆಲವು ಸ್ನೇಹಿತರು ಅವರಿಗೆ ಒಂದಷ್ಟು ಆರ್ಥಿಕ ಭದ್ರತೆಯ ವ್ಯವಸ್ಥೆ ಮಾಡಿಕೊಡುತ್ತಿದ್ದರು.

ಎಂದೂ ಹಣಕ್ಕಾಗಿ ಹಂಬಲಿಸದ, ಅಧಿಕಾರದ ಅಂದಕ್ಕಾಗಿ ಹೆಣಗಾಡದ ಅಂಬಿ ಜನರ ಪ್ರೀತಿ, ಗೌರವಗಳನ್ನು ಅಗಾಧವಾಗಿ ಸಂಪಾದಿಸಿದ್ದರು. ಮನಸ್ಸು ಮಾಡಿದ್ದರೆ ಕರ್ನಾಟಕದ ಮುಖ್ಯಮಂತ್ರಿಯಾಗಬಹುದಿತ್ತು ಎಂಬುದನ್ನು ಚೆನ್ನಾಗಿ ತಿಳಿದಿದ್ದ ಅಂಬರೀಷ್ ಅವರಿಗೆ ಅಪ್ರಾಮಾಣಿಕತೆಯ ಬಗ್ಗೆ ಅಸಹನೆ ಇತ್ತು. ಆ ಕಾರಣದಿಂದಲೇ ಅವರು ರಾಜಕೀಯದಲ್ಲಿದ್ದಾಗಲೂ ಒಂದು ಕಾಲನ್ನು ಹೊರಗೇ ಇಟ್ಟಿದ್ದರು. ಕೆಲವರಿಗೆ ಮುಜುಗರ ತರಿಸುವ ರೀತಿಯಲ್ಲಿ, ಸತ್ಯಗಳನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಿದ್ದರು. ಅಳುಕು – ಮುಜುಗರ ಇಲ್ಲದೆ ಜೀವಿಸಿದ್ದರು. ಬದುಕು ತೆರೆದ ಪುಸ್ತಕವಾಗಿತ್ತು ಅನ್ನುವುದಕ್ಕೆ ಅವರೇ ಉದಾಹರಣೆ.

**

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.