ADVERTISEMENT

ಆನ್‌ಲೈನ್‌ ಜೂಜು ನಿಷೇಧಕ್ಕೆ ತಿದ್ದುಪಡಿ ಮಸೂದೆ: ಜೂಜಾಡಿದರೆ 6 ತಿಂಗಳು ಜೈಲು

ಆನ್‌ಲೈನ್‌ ಜೂಜು ನಿಷೇಧಕ್ಕೆ ತಿದ್ದುಪಡಿ ಮಸೂದೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 20:39 IST
Last Updated 6 ಸೆಪ್ಟೆಂಬರ್ 2021, 20:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹಣವನ್ನು ಪಣವಾಗಿರಿಸಿ ಆಡುವ ಆನ್‌ಲೈನ್‌ ಗೇಮ್‌ಗಳೂ ಸೇರಿದಂತೆ ಎಲ್ಲ ಬಗೆಯ ಜೂಜಾಟವನ್ನೂ ಜಾಮೀನುರಹಿತ ಅಪರಾಧ ಎಂದು ಪರಿಗಣಿಸುವ ಪ್ರಸ್ತಾವ ಕರ್ನಾಟಕ ಪೊಲೀಸ್‌ ಕಾಯ್ದೆಯ ತಿದ್ದುಪಡಿ ಮಸೂದೆಯಲ್ಲಿದೆ. ಜೂಜಾಟದಲ್ಲಿ ಭಾಗಿಯಾದವರಿಗೆ ವಿಧಿಸುವ ಶಿಕ್ಷೆ ಮತ್ತು ದಂಡವನ್ನು ಹಲವು ಪಟ್ಟು ಹೆಚ್ಚಿಸುವ ಪ್ರಸ್ತಾವವೂ ಇದೆ.

ಆನ್‌ಲೈನ್‌ ಜೂಜಾಟ ನಿಷೇಧಿಸುವುದಕ್ಕಾಗಿ ‘ಕರ್ನಾಟಕ ಪೊಲೀಸ್‌ ಕಾಯ್ದೆ–1963’ಕ್ಕೆ ತಿದ್ದುಪಡಿ ತರಲಾಗುತ್ತಿದೆ. ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಸಭೆ ಶನಿವಾರ ಒಪ್ಪಿಗೆ ನೀಡಿದೆ. ಹಣವನ್ನು ಪಣವಾಗಿರಿಸಿ ಆಡುವ ಆನ್‌ಲೈನ್‌ ಗೇಮ್‌ಗಳನ್ನೂ ನಿಷೇಧಿತ ಜೂಜು ಚಟುವಟಿಕೆಯ ವ್ಯಾಪ್ತಿಯಲ್ಲಿ ಸೇರಿಸುವ ಉಲ್ಲೇಖ ಮಸೂದೆಯಲ್ಲಿದೆ. ‘ಸ್ಕಿಲ್‌ ಗೇಮ್‌’ಗಳ ಹೆಸರಿನಲ್ಲಿ ಜೂಜಾಡುವುದನ್ನೂ ಅಪರಾಧ ಎಂದು ಪರಿಗಣಿಸಲು ಉದ್ದೇಶಿಸಲಾಗಿದೆ.

ಕಂಪ್ಯೂಟರ್‌, ಮೊಬೈಲ್‌ ಅಪ್ಲಿಕೇಷನ್‌ ಸೇರಿದಂತೆ ಯಾವುದೇ ಸಾಧನವನ್ನು ಬಳಸಿಕೊಂಡು ಆನ್‌ಲೈನ್‌ ಮೂಲಕ ಜೂಜಾಡುವುದನ್ನೂ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮನರಂಜನಾ ಕ್ಲಬ್‌ಗಳು, ಗೇಮಿಂಗ್‌ ಹೌಸ್‌ಗಳಲ್ಲಿ ಈ ಚಟುವಟಿಕೆ ನಡೆಸುವುದನ್ನೂ ಅಪರಾಧ ಎಂದು ಪರಿಗಣಿಸುವ ಪ್ರಸ್ತಾವ ತಿದ್ದುಪಡಿ ಮಸೂದೆಯಲ್ಲಿದೆ.

ADVERTISEMENT

ನೇರವಾಗಿ ನಗದು ಹೂಡಿಕೆ ಮಾಡಿ, ಆನ್‌ಲೈನ್‌ ಮೂಲಕ ಹಣ ವರ್ಗಾಯಿಸಿ, ಹಣವನ್ನು ಪಾವತಿಸಿ ಪಡೆದ ಟೋಕನ್‌ ಬಳಸಿ, ಡಿಜಿಟಲ್‌ ಅಥವಾ ವರ್ಚ್ಯುಯಲ್‌ ಕರೆನ್ಸಿ ಬಳಸಿಕೊಂಡು ಜೂಜಾಡುವುದೂ ನಿಷೇಧಿತ ಚಟುವಟಿಕೆಗಳ ವ್ಯಾಪ್ತಿಯಲ್ಲಿ ಬರಲಿದೆ. ರಾಜ್ಯದ ಒಳಗೆ ಅಥವಾ ಹೊರಗಿನಿಂದ ನಡೆಯುವ ಆನ್‌ಲೈನ್‌ ಜೂಜಾಟವನ್ನೂ ಕಾಯ್ದೆಯ ವ್ಯಾಪ್ತಿಗೆ ತರುವ ಪ್ರಸ್ತಾವವಿದೆ.

ಯಾವುದೇ ಬಗೆಯ ಜೂಜಾಟದಲ್ಲಿ ಭಾಗಿಯಾಗುವುದು, ಜೂಜು ಕೇಂದ್ರ ತೆರೆಯುವುದು, ಅದಕ್ಕೆ ಸಹಾಯ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಸುವುದು, ಜೂಜಾಟದ ಆರೋಪದಲ್ಲಿ ಗಡೀಪಾರು ಮಾಡಲಾದ ಆರೋಪಿ ಪುನಃ ಮರಳಿ ಬರುವುದು ಮತ್ತಿತರ ಅಪರಾಧ ಕೃತ್ಯಗಳಿಗೆ ವಿಧಿಸುತ್ತಿದ್ದ ಶಿಕ್ಷೆ ಮತ್ತು ದಂಡವನ್ನು ಹಲವು ಪಟ್ಟು ಹೆಚ್ಚಿಸುವ ಪ್ರಸ್ತಾವವುಳ್ಳ ತಿದ್ದುಪಡಿ ಮಸೂದೆಯ ಕರಡಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಯಾವ ಅಪರಾಧಕ್ಕೆ ಏನು ಶಿಕ್ಷೆ?

l ಜೂಜು ಕೇಂದ್ರ ತೆರೆಯುವುದು, ಅದಕ್ಕಾಗಿ ಕಟ್ಟಡ ಬಾಡಿಗೆಗೆ ನೀಡುವುದು, ಜೂಜು ಕೇಂದ್ರದ ಮೇಲ್ವಿಚಾರಣೆ ನಡೆಸುವವರು, ಜೂಜಾಟಕ್ಕೆ ಸಾಲ ನೀಡುವವರಿಗೆ ಮೂರು ವರ್ಷಗಳವರೆಗೆ ಜೈಲು ಮತ್ತು ₹ 1 ಲಕ್ಷದವರೆಗೆ ದಂಡ.

* ಮೇಲಿನ ಆರೋಪಗಳ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಲೇಬೇಕಾದ ವಿಶೇಷ ಕಾರಣಗಳು ಇಲ್ಲದಿರುವ ಸಂದರ್ಭದಲ್ಲಿ ಅಪರಾಧ ಸಾಬೀತಾದರೆ ಆರು ತಿಂಗಳವರೆಗೆ ಜೈಲು ಮತ್ತು ₹ 10,000 ದಂಡ.

* ಯಾವುದೇ ಬಗೆಯ ಜೂಜು ಕೇಂದ್ರಗಳಲ್ಲಿ ಜೂಜಾಟದಲ್ಲಿ ತೊಡಗಿರುವವರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ₹ 10,000 ದಂಡ.

*ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದವರಿಗೆ ಒಂದು ವರ್ಷ ಜೈಲು ಮತ್ತು ₹ 20,000 ದಂಡ.

*ಜೂಜಾಡುವವರಿಗೆ ಸಾಲ ಸೇರಿದಂತೆ ಎಲ್ಲ ರೀತಿಯ ನೆರವು ನೀಡುವವರಿಗೆ ಮೊದಲ ಬಾರಿಯ ಅಪರಾಧಕ್ಕೆ ಕನಿಷ್ಠ ಆರು ತಿಂಗಳ ಜೈಲು ಮತ್ತು ₹ 10,000 ದಂಡ.ಎರಡನೇ ಅಪರಾಧಕ್ಕೆ ಕನಿಷ್ಠ ಒಂದು ವರ್ಷ ಜೈಲು ಮತ್ತು ₹ 15,000 ದಂಡ. ಮೂರನೇ ಅಪರಾಧಕ್ಕೆ ಕನಿಷ್ಠ 18 ತಿಂಗಳ ಜೈಲು ಮತ್ತು ₹ 20,000 ದಂಡ.

* ಜೂಜಾಡುವ ಉದ್ದೇಶಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೇರಿರುವ ಅಪರಾಧಕ್ಕೆ ಆರು ತಿಂಗಳ ಜೈಲು ಮತ್ತು ₹ 10,000 ದಂಡ.

* ಜೂಜಾಟದ ಅಪರಾಧ ಸಾಬೀತಾಗಿ ಗಡೀಪಾರು ಮಾಡಿದ ಆದೇಶ ಉಲ್ಲಂಘಿಸಿ ಆ ಪ್ರದೇಶವನ್ನು ಮರು ಪ್ರವೇಶ ಮಾಡಿದರೆ ₹ 25,000ದಿಂದ ₹ 1 ಲಕ್ಷದವರೆಗೆ ದಂಡ.

ಕುದುರೆ ರೇಸ್‌ಗೆ ವಿನಾಯಿತಿ:

ಕುದುರೆ ರೇಸ್‌ನ ಮೇಲೆ ಹಣವನ್ನು ಪಣವಾಗಿಟ್ಟು ನಡೆಸುವ ಬಾಜಿ, ಬೆಟ್ಟಿಂಗ್‌ ಮತ್ತು ಲಾಟರಿ ಚಟುವಟಿಕೆಗಳನ್ನು ನಿಷೇಧಿತ ಜೂಜಾಟದ ವ್ಯಾಪ್ತಿಯಿಂದ ಹೊರಗಿಡುವ ಪ್ರಸ್ತಾವ ಕರ್ನಾಟಕ ಪೊಲೀಸ್‌ ಕಾಯ್ದೆಯ ತಿದ್ದುಪಡಿ ಮಸೂದೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.