ದಾವಣಗೆರೆ: ‘ಹಾಲಿ ಕಾಯ್ದೆಯಿಂದಾಗಿ ಭೋವಿ ಸಮಾಜದವರು ಕಲ್ಲು ಒಡೆಯುವ ಕುಲ ಕಸುಬು ಮುಂದುವರಿಸುವುದು ಕಷ್ಟವಾಗಿದೆ. ಮುಂದಿನ ಅಧಿವೇಶನದಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಕೈಯಿಂದ ಕಲ್ಲು ಒಡೆಯುವವರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸೋಮವಾರ ಭರವಸೆ ನೀಡಿದರು.
ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ ಇಲ್ಲಿನ ಶಿವಯೋಗಾಶ್ರಮದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ 60ನೇ ರಥೋತ್ಸವ, ಸಿದ್ಧರಾಮೇಶ್ವರ ಸ್ವಾಮೀಜಿ 20ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೋವಿ ಸಮಾಜದ ಕುಲಕಸುಬಿನಿಂದಲೇ ಸಮಾಜ, ದೇಶ ಕಟ್ಟಲು ಸಾಧ್ಯವಾಗಿದೆ. ಕಲ್ಲು ಒಡೆಯದೆ ಮಂದಿರ ನಿರ್ಮಿಸಲು, ದೇವರ ಮೂರ್ತಿ ಕೆತ್ತಲು, ರಸ್ತೆ ನಿರ್ಮಿಸಲು, ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಕಲ್ಲು ಒಡೆಯುವವರಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನನ್ನ ಅಧಿಕಾರದ ಅವಧಿಯಲ್ಲೇ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಅವರು ಅಭಯ ನೀಡಿದರು.
‘ಭೋವಿ ಅಭಿವೃದ್ಧಿ ನಿಗಮದಲ್ಲಿ ಸಮಾಜಕ್ಕೆ ತೊಂದರೆ ನೀಡುತ್ತಿದ್ದ ಅಧಿಕಾರಿಗಳನ್ನು ಬದಲಾಯಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಈ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದು ತಿಳಿಸಿದರು.
‘ಭೋವಿ ನಿಗಮದಲ್ಲಿರುವ ಭ್ರಷ್ಟ ಅಧಿಕಾರಿಗಳು ಜನರಿಗೆಸೌಲಭ್ಯ ತಲುಪಿಸಲು ಬಿಡುತ್ತಿಲ್ಲ. ಕಲ್ಲು ಒಡೆಯುವವರಿಗೆ ಕಿರುಕುಳ ನೀಡುತ್ತಿದ್ದಾರೆ. ಸಭೆ ಕರೆದು ನಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು’ ಎಂದು ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.