ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿನ ಸ್ಥಳೀಯ ಪರಿಶೀಲನಾ ಸಮಿತಿಯ (ಎಲ್‌ಐಸಿ) ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಭೌತಿಕ ಹಾಗೂ ಶೈಕ್ಷಣಿಕ ಗುಣಮಟ್ಟ ಪರಿಶೀಲನೆಗೆ ಪ್ರತಿ ವರ್ಷ ಸಿಂಡಿಕೇಟ್ ಸದಸ್ಯರು, ಪ್ರಾಧ್ಯಾಪಕರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಗಳು ತಮಗೆ ವಹಿಸಿದ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಿಗೆ ಭೇಟಿ ನೀಡಿ, ಕಟ್ಟಡ, ಪ್ರಯೋಗಾಲಯ, ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತವೆ. ಎಲ್‌ಐಸಿ ನೀಡುವ ವರದಿ ಆಧಾರದಲ್ಲಿ ಅಂತಹ ಕಾಲೇಜುಗಳಿಗೆ ಮಾನ್ಯತೆ ನೀಡುವಿಕೆ, ಮುಂದುವರಿಯುವಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲ ಸಮಿತಿಗಳ ವಿರುದ್ಧ ಈಚೆಗೆ ಆರೋಪಗಳು ಬಂದಿವೆ. ಹಾಗಾಗಿ, ಸಮಿತಿ ರಚನೆಗೆ ಇರುವ ನಿಯಮಗಳನ್ನು ಬದಲಿಸುವ ಅಗತ್ಯವಿದೆ ಎಂದರು.
ಕೇಂದ್ರದ ಶೈಕ್ಷಣಿಕ ಅನುದಾನ ಸ್ಥಗಿತ ಸಾಧ್ಯವಿಲ್ಲ:
ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು, ಕೇಂದ್ರದಂತೆಯೇ ರಾಜ್ಯಗಳಿಗೂ ಶಿಕ್ಷಣ ನೀತಿ ರೂಪಿಸುವ ಅಧಿಕಾರವಿದೆ. ರಾಜ್ಯ ಶಿಕ್ಷಣ ನೀತಿ ಜಾರಿಯಾದರೆ ಕೇಂದ್ರದ ಅನುದಾನ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಅಂತಹ ಒತ್ತಡ, ಅಪಪ್ರಚಾರಗಳಿಗೆ ಮಣಿಯುವುದೂ ಇಲ್ಲ ಎಂದು ಹೇಳಿದರು.
ಕೇರಳ, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ತಮಗೆ ಅನುಕೂಲವಾಗುವಂತಹ ಶಿಕ್ಷಣ ನೀತಿಯನ್ನು ಈಗಾಗಲೇ ಜಾರಿಗೆ ತಂದಿವೆ. ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾರ್ಗಸೂಚಿಗಳನ್ನೂ ಅಳವಡಿಸಿಕೊಂಡಿವೆ. ಕೇಂದ್ರ ಸರ್ಕಾರ ಐದು ವರ್ಷಗಳಿಗೊಮ್ಮೆ ಅನುದಾನ ನೀಡುತ್ತದೆ. ಅದರಲ್ಲಿ ರಾಜ್ಯದ ಪಾಲು ಶೇ 40ರಷ್ಟು, ಕೇಂದ್ರದ ಪಾಲು ಶೇ 60ರಷ್ಟು ಇರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.