ADVERTISEMENT

ರಾಜ್ಯದ ಜನರನ್ನು ಅವಮಾನಿಸಿದ ಅಮಿತ್‌ ಶಾ : ಮಲ್ಲಿಕಾರ್ಜುನ ಖರ್ಗೆ

ಸುಪ್ರೀಂ ಕೋರ್ಟ್‌ನಲ್ಲಿ ಕೇಸ್‌, ಚುನಾವಣಾ ಆಯೋಗಕ್ಕೂ ದೂರು: ಕೇಂದ್ರ ಗೃಹಮಂತ್ರಿ ವಿರುದ್ಧ ಕಿಡಿಕಾರಿದ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2023, 10:39 IST
Last Updated 26 ಏಪ್ರಿಲ್ 2023, 10:39 IST
ಚಿಕ್ಕೋಡಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು
ಚಿಕ್ಕೋಡಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು   

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ದಂಗೆಗಳು ಏಳುತ್ತವೆ ಎಂದು ಹೇಳುವ ಮೂಲಕ ಅಮಿತ್‌ ಶಾ ಅವರು ಕರ್ನಾಟಕದ ಜನತೆಯನ್ನು ಅವಮಾನಿಸಿದ್ದಾರೆ. ನಾವೇನು ದಂಗೆಕೋರರೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.

ಚಿಕ್ಕೋಡಿಯಲ್ಲಿ ಬುಧವಾರ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಗೃಹ ಮಂತ್ರಿಯಾದವರೇ ಈ ರೀತಿ ಹೇಳಿಕೆ ನೀಡಿದ್ದು ಅಚ್ಚರಿ ಮೂಡಿಸಿದೆ. ಕರ್ನಾಟಕದ ಜನರೆಲ್ಲ ದಂಗೆಕೋರರು, ಅವರನ್ನು ಮೋದಿ ಮಾತ್ರ ನಿಯಂತ್ರಣ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ನೇರವಾಗಿ ಹೇಳಿದ್ದಾರೆ. ರಾಜ್ಯದ ಜನರ ಮನಸ್ಸಿಗೆ ದೊಡ್ಡ ನೋವು ನೀಡಿದ್ದಾರೆ’ ಎಂದರು.

‘ಜಾತಿಗಳ ಮಧ್ಯೆ, ಧರ್ಮಗಳ ಮಧ್ಯೆ ಕಲಹ ತಂದಿಟ್ಟು ದಂಗೆ ಎಬ್ಬಿಸುವವರು ಬಿಜೆಪಿಯವರು. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ತರದೇ ಇದ್ದರೆ ದಂಗೆ ಎಬ್ಬಿಸುತ್ತೇವೆ ಎಂದು ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಇಷ್ಟಕ್ಕೇ ಬಿಡುವುದಿಲ್ಲ. ಅಮಿತ್‌ ಶಾ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡುತ್ತೇವೆ. ಹೇಳಿಕೆ ಕುರಿತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇವೆ’ ಎಂದೂ ಖರ್ಗೆ ಹೇಳಿದರು.

ADVERTISEMENT

‘ಅಮಿತ್‌ ಶಾಗೆ ಈಗ 55 ವರ್ಷ ವಯಸ್ಸು. ಆದರೆ, ನಾನು ಶಾಸಕ– ಸಂಸದನಾಗಿಯೇ 55 ವರ್ಷ ಕಳೆದಿದ್ದೇನೆ. ಅವರು ಈಗ ದೇಶ ನೋಡುತ್ತಿದ್ದಾರೆ, ಅಧಿಕಾರ ನೋಡುತ್ತಿದ್ದಾರೆ. ಆದರೂ ಮೋದಿ, ಶಾ ಇಲ್ಲದಿದ್ದರೆ ದೇಶವೇ ಇರುವುದಿಲ್ಲ ಎಂಬಂತೆ ಮಾತನಾಡುತ್ತಾರೆ’ ಎಂದೂ ಹರಿಹಾಯ್ದರು.

ಚಿಕ್ಕೋಡಿಯಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಸೇರಿದ ಜನಸ್ತೋಮ
ಚಿಕ್ಕೋಡಿಯಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಸೇರಿದ ಜನಸ್ತೋಮ

ಕಳ್ಳರಿದ್ದಾರೆ ಎಚ್ಚರಿಕೆ:

‘ಈ ಬಾರಿ ಕಾಂಗ್ರೆಸ್‌ಗೆ ಬಹುಮತ ಸಿಗುವುದು ಸ್ಪಷ್ಟವಾಗಿದೆ. ಆದರೆ, ಬಹುಮತ ಇದ್ದರೆ ಸಾಲದು. 150 ಸೀಟುಗಳನ್ನು ಗೆಲ್ಲಿಸಬೇಕು. ಏಕೆಂದರೆ ಬಿಜೆಪಿಯವರು ಕಳ್ಳರು. ಅವರು ಶಾಸಕರನ್ನೇ ಕದ್ದು ತೆಗೆದುಕೊಂಡು ಹೋಗುತ್ತಾರೆ. ನೀವು ಊರಿಗೆ ಹೋಗುವಾಗ ಮನೆಗೆ ಕಳ್ಳರು ನುಗ್ಗದಂತೆ ಕೀಲಿ ಹಾಕುತ್ತೀರಿ. ಅದೇ ರೀತಿ ಕಾಂಗ್ರೆಸ್‌ ಪಕ್ಷವನ್ನೂ ಭದ್ರ ಮಾಡಿರಿ’ ಎಂದರು.

‘75 ವರ್ಷಗಳಲ್ಲಿ ಕಾಂಗ್ರೆಸ್‌ ಏನನ್ನೂ ಮಾಡಿಲ್ಲ, ನಾವೇ ಈಗ ದೇಶ ಹೊತ್ತು ನಿಂತಿದ್ದೇವೆ ಎಂಬರ್ಥದಲ್ಲಿ ಮೋದಿ ಮಾತನಾಡುತ್ತಾರೆ. ನೆಹರೂ ಅವರ ಕಾಲದಿಂದಲೂ ದೇಶದಾದ್ಯಂತ ಅಣೆಕಟ್ಟೆಗಳು, ವಿಶ್ವವಿದ್ಯಾಲಯಗಳು, ಉದ್ಯಮ ವಲಯವನ್ನು ಕಟ್ಟಿದ್ದು ಯಾರು? ಸ್ವತಃ ಮೋದಿಗೇ, ಅಮಿತ್‌ ಶಾಗೆ ನಾವೇ ಶಿಕ್ಷಣ ಕೊಡಿಸಿದ್ದೇವೆ’ ಎಂದು ಲೇವಡಿ ಮಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶಿಕ್ಷಣದ ಪ್ರಮಾಣ ಕೇವಲ 17 ಶೇಕಡ ಇತ್ತು. ಆದರೆ, ಈಗ ಶೇ 75ರಷ್ಟಿದೆ. ಶೇ 60ರಷ್ಟು ಸಾಕ್ಷರತೆ ನೀಡಿದ್ದು ಕಾಂಗ್ರೆಸ್‌ ಸರ್ಕಾರಗಳೇ. ಆಹಾರ ಭದ್ರತೆ ಇಲ್ಲದೇ, ಅನ್ನಕ್ಕಾಗಿ ಜನ ಸಾಲಿನಲ್ಲಿ ನಿಂತುಕೊಳ್ಳುವ ಸ್ಥಿತಿ ಇತ್ತು. ಆದರೆ, ಹಸಿರು ಕ್ರಾಂತಿಯ ಮೂಲಕ ಕೃಷಿ ಉತ್ಪಾದನೆ ಹೆಚ್ಚಳ ಮಾಡಿ, ಆಹಾರ ಸ್ವಾವಲಂಬನೆ ಸಾಧಿಸಿದ್ದು ಕಾಂಗ್ರೆಸ್‌ ಸರ್ಕಾರಗಳು. ಹೇಳುತ್ತ ಹೋದರೆ ಮೋದಿ ಅವರು ತಿಳಿದುಕೊಳ್ಳುವ ಸಂಗತಿಗಳು ಸಾಕಷ್ಡಿವೆ’ ಎಂದೂ ಹೇಳಿದರು.

‘ಬಿಜೆಪಿ ಸರ್ಕಾರ ಬಂದಾಗಿನಿಂದ ಧರ್ಮ ದ್ವೇಷವನ್ನಲ್ಲದೇ ಏನನ್ನೂ ಮಾಡಿಲ್ಲ. ಒಂದು ಧರ್ಮದವನ್ನು ಇನ್ನೊಂದು ಧರ್ಮದ ಮೇಲೆ ಎತ್ತಿ ಕಟ್ಟಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದೂ ಖರ್ಗೆ ಆರೋಪಿಸಿದರು.

*

ರಾಹುಲ್‌ ಭಾಷಣ ಡಿಲಿಟ್‌:

‘ದೇಶದಲ್ಲಿ ಜನ ಬೆಲೆ ಏರಿಕೆಯಿಂದ ಬಳಲುತ್ತಿದ್ದಾರೆ. ಆದರೆ, ಮೋದಿ ಅವರು ಒಬ್ಬನೇ ಉದ್ಯಮಿಗೆ ಎಲ್ಲವನ್ನೂ ಬರೆದುಕೊಡುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರು, ಎಲ್‌ಐಸಿ, ಕೃಷಿ ವಿಮೆ ಹೀಗೆ ಯಾವ ಕ್ಷೇತ್ರದಲ್ಲಿ ಸಾರ್ವಜನಿಕ ಆಸ್ತಿ ಇದೆಯೋ ಅದೆಲ್ಲವನ್ನೂ ತಮಗೆ ಬೇಕಾದ ಉದ್ಯಮಿಗೆ ಗುತ್ತಿಗೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ರಾಹುಲ್‌ ಗಾಂಧಿ ಅವರು ಇದನ್ನು ಪ್ರಶ್ನಿಸಿದ್ದಕ್ಕೆ ಅವರ ಲೋಕಸಭೆ, ರಾಜ್ಯಸಭೆಗಳಲ್ಲೂ ‘ಡಿಲಿಟ್‌’ ಮಾಡಿಸಿದ್ದಾರೆ. ಲೋಕಸಭೆಯಲ್ಲೇ ವಾಕ್‌ ಸ್ವಾತಂತ್ರ್ಯ, ಪ್ರಶ್ನೆ ಮಾಡುವ ಸ್ವಾತಂತ್ರ್ಯ ಕಿತ್ತುಕೊಂಡಿದ್ದಾರೆ’ ಎಂದೂ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿರು.

‘ನಾರಾಯಣಭಾಯಿ ಕಚಾಡಿಯಾ ಎಂಬ ಗುಜರಾತಿನ ಸಂಸದ ವೈದ್ಯರೊಬ್ಬರ ಮೇಲೆ ಹಲ್ಲೆ– ನಿಂದನೆ ಮಾಡಿದ್ದ. ಅವನಿಗೆ ಜಾತಿ ನಿಂದನೆ ಪ್ರಕರಣದಲ್ಲಿ ಮೂರೂವರೆ ವರ್ಷ ಶಿಕ್ಷೆ ಆಗಿದೆ. ಕೆಳ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೂ ಅವರ ವಿರುದ್ಧವೇ ತೀರ್ಪು ಬಂದಿದೆ. ಆದರೆ, ಇದೂವರೆಗೂ ಆ ವ್ಯಕ್ತಿ ಸಂಸತ್‌ನಲ್ಲಿದ್ದಾರೆ. ಆದರೆ, ರಾಹುಲ್‌ ಗಾಂಧಿ ಅವರು ವಿರೋಧ ಪಕ್ಷವನ್ನು ಟೀಕಿಸಿದ್ದಕ್ಕೆ ಅವರ ಮೇಲೆ ಕೇಸ್‌ ಮಾಡಿ, ಸಂಸತ್‌ ಸ್ಥಾನದಿಂದಲೇ ಅನರ್ಹ ಮಾಡಿದರು. ತರಾತುರಿಯಲ್ಲಿ ತೀರ್ಪು ಬರುವಂತೆ ಮಾಡಿ, ಮನೆಯಿಂದಲೂ ಹೊರಹಾಕಿದರು. ಅವರಿಗೆ ಒಂದು ನ್ಯಾಯ, ನಮಗೆ ಒಂದು ನ್ಯಾಯವೇ?’ ಎಂದೂ ಖರ್ಗೆ ಪ್ರಶ್ನೆ ಮಾಡಿದರು.

‘ಡಬಲ್‌ ಎಂಜಿನ್‌ ಸರ್ಕಾರ ಏನು ಮಾಡಿದೆ ಎಂದು ಎದೆ ತಟ್ಟಿಕೊಂಡು ಹೇಳಿ ನೋಡೋಣ. ನೀರಾವರಿ, ಉದ್ಯೋಗ ಈ ಎರಡು ಕ್ಷೇತ್ರಗಳಲ್ಲಿ ಕನಿಷ್ಠ ಯಾವ ಸಾಧನೆ ಮಾಡಿದ್ದೀರಿ ತೋರಿಸಿ. ರಾಜ್ಯದಲ್ಲಿ ಇನ್ನೂ 2.58 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಿದರೆ ಬಡವರು, ಹಿಂದುಳಿದವರಿಗೆ ಅನುಕೂಲವಾಗುತ್ತದೆ ಎಂದು ಉದ್ದೇಶಪೂರ್ವಕವಾಗಿ ಖಾಲಿ ಇಟ್ಟಿದ್ದಾರೆ. 25 ಲಕ್ಷ ಯುವಜನರು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಇದೇ ನಿಮ್ಮ ಸಾಧನೆಯೇ?’ ಎಂದೂ ಪ್ರಶ್ನಿಸಿದರು.

‘ಈ ಬಾರಿ ಕಾಂಗ್ರೆಸ್‌ ಸರ್ಕಾರ ಬಂದರೆ ಮನೆಯ ಯಜಮಾನಿಗೆ ₹2000 ಪ್ರತಿ ತಿಂಗಳು ನೀಡುತ್ತೇವೆ. ಇದರಿಂದ ಮನೆ ನಡೆಸಲು ಆಕೆ ಪತಿಯ ಬಳಿ ಕೈಚಾಚಬೇಕಿಲ್ಲ. 200 ಯೂನಿಟ್‌ ವಿದ್ಯುತ್‌ ಉಚಿತ ನೀಡುತ್ತೇವೆ. ನಿರುದ್ಯೋಗಿ ಯುವಜನರಿಗೆ ತಲಾ ₹1500 ರಿಂದ ₹ 3000 ನೀಡುತ್ತೇವೆ. ಅವರಿಗೆ ಉದ್ಯೋಗ ಸಿಗುವವರೆಗೆ ಇದು ಮಾನಸಿಕ ಒತ್ತಡ ನಿವಾರಣೆ ಮಾಡುತ್ತದೆ’ ಎಂದೂ ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿದರು. ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳಾದ ಚಿಕ್ಕೋಡಿಯ ಗಣೇಶ ಹುಕ್ಕೇರಿ, ಹುಕ್ಕೇರಿಯ ಎ.ಬಿ.ಪಾಟೀಲ, ರಾಯಬಾಗದ ಮಹಾವೀರ ಮೊಹಿತೆ, ನಿಪ್ಪಾಣಿಯ ಕಾಕಾಸಾಹೇಬ ಪಾಟೀಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವಿಷ್ಣುನಾಥ, ಕಾಂಗ್ರೆಸ್‌ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಧರೆಪ್ಪ ಠಕ್ಕೆಣ್ಣವರ, ರಾಮಾ ಮಾನೆ, ಶಾಮರಾವ್ ರೇವಡೆ, ಸಾಬಿರ್‌ ಜಮಾದಾರ, ಸತೀಶ ಕುಲಕರ್ಣಿ, ಅಣ್ಣಾಸಾಹೇಬ ಹವಲೆ, ರವಿ ಮಿರ್ಜೆ ವೇದಿಕೆ ಮೇಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.