ದೇವನಹಳ್ಳಿ: ಬಿಜೆಪಿ ಚುನಾವಣೆ ಪ್ರಚಾರದ ವಿಜಯ ಸಂಕಲ್ಪ ರಥಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಂಜೆ ಕೆಂಪೇಗೌಡರ ಪೂರ್ವಜರ ಗ್ರಾಮ ಆವತಿಯಲ್ಲಿ ಚಾಲನೆ ನೀಡಲಿದ್ದಾರೆ. ನಂತರ ರೋಡ್ ಷೋ ನಡೆಸಲಿದ್ದು, ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮಿತ್ ಶಾ ಸ್ವಾಗತಕ್ಕಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಪೈಪೋಟಿಗೆ ಬಿದ್ದಂತೆ ಬ್ಯಾನರ್ ಕಟ್ಟಿ ಅಭಿಮಾನ ಮೆರೆದಿದ್ದಾರೆ. ಇಡೀ ನಗರದ ತುಂಬಾ ಬೃಹತ್ ಕಟೌಟ್, ಬ್ಯಾನರ್, ಬಂಟಿಗ್ಸ್ ಮತ್ತು ಬಿಜೆಪಿ ಧ್ವಜಗಳು ರಾರಾಜಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿ, ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರಸ್ತೆ ಕಾಣದಂತೆ ಆಳೆತ್ತರದ ಕಟೌಟ್ ನಿಲ್ಲಿಸಲಾಗಿದೆ. ದೇವನಹಳ್ಳಿಯ ಸಣ್ಣ ಪುಟ್ಟ ಗಲ್ಲಿ, ಬೀದಿಗಳಲ್ಲಿಯೂ ಬ್ಯಾನರ್ ಹಾಕಲಾಗಿದೆ. ರಸ್ತೆ ಕಾಣದಂತಾಗಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
ರಸ್ತೆ ಮಧ್ಯೆ ಹಾಕಿರುವ ಬ್ಯಾನರ್ ಗಳು ಕಿತ್ತು ರಸ್ತೆಗೆ ಬಿದ್ದಿವೆ. ದೇವನಹಳ್ಳಿ ಕೋರ್ಟ್ ಸೇರಿದಂತೆ ಸರ್ಕಾರಿ ಕಚೇರಿ, ಪ್ರಮುಖ ವೃತ್ತಗಳು ಕಾಣುತ್ತಿಲ್ಲ. ಎಲ್ಲವೂ ಬಿಜೆಪಿ ಬ್ಯಾನರ್, ಕಟೌಟ್ ಗಳಿಂದ ಮುಚ್ಚಿ ಹೋಗಿವೆ.
ಸ್ಥಳೀಯ ಮುಖಂಡರು, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ದೇವನಹಳ್ಳಿ ಆಗಮಿಸುವ ಎಲ್ಲರಿಗೂ ಕಾಣುವಂತೆ ಅಮಿತ್ ಶಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಜೊತೆ ತಮ್ಮ ಆಳೆತ್ತರದ ಕಟೌಟ್ ಹಾಕಿಸಿದ್ದಾರೆ.
ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು ಆಗಸದೆತ್ತರದ ದೊಡ್ಡ ಕಟೌಟ್ ಹಾಕಿದ್ದು, ಜೋರಾದ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿ ಇದೆ.
ಮಧ್ಯಾಹ್ನದ ನಂತರ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿಂದ ಶಾಲಾ ಕಾಲೇಜುಗಳಿಗೆ ಮಧ್ಯಾಹ್ನದ ನಂತರ ಅರ್ಧ ದಿನ ರಜೆ ಘೋಷಿಸಲಾಗಿದೆ. ಭದ್ರತೆಗಾಗಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಹೆಜ್ಜೆ, ಹೆಜ್ಜೆಗೂ ಪೊಲೀಸರು ನಿಂತಿದ್ದಾರೆ.
ಬಿಜೆಪಿ ಪ್ರಮುಖ ನಾಯಕರು, ಅವರ ಬೆಂಬಲಿಗರು ಹತ್ತಾರು ವಾಹನಗಳಲ್ಲಿ ದೇವನಹಳ್ಳಿಯ ತ್ತ ದೌಡಾಯಿಸುತ್ತಿದ್ದಾರೆ. ಹಾಗಾಗಿ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ದಟ್ಟಣೆ ನಿಭಾಯಿಸಲು ಪೊಲೀಸರು ಪರದಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.