ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ‘ಮಿಷನ್–22’ ಗುರಿ ಇಟ್ಟುಕೊಂಡಿರುವ ಬಿಜೆಪಿ ರಾಜ್ಯ ಘಟಕ ಗುರುವಾರದಿಂದ ‘ಮೋದಿ ವಿಜಯ ಸಂಕಲ್ಪ ಯಾತ್ರೆ’ ನಡೆಸಲಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾ ಹಾಗೂ ಪಟ್ಟಣದ ಪ್ರಮುಖ ಕೇಂದ್ರಗಳಲ್ಲಿ ಸಂಚರಿಸಲಿದ್ದು, ಮಾರ್ಚ್ 21ರಂದು ಮುಕ್ತಾಯಗೊಳ್ಳಲಿದೆ.
ಇದೇ 26ರಂದು ಕಮಲ ಜ್ಯೋತಿ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇಂದ್ರ ಸರ್ಕಾರದ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ ಒಂದೇ ಕಡೆ ಸೇರಿ ದೀಪೋತ್ಸವ ಕಾರ್ಯಕ್ರಮ ಆಚರಿಸಲಿದ್ದಾರೆ. ಈ ಕಾರ್ಯಕ್ರಮ ರಾತ್ರಿ 7 ಗಂಟೆಗೆ ನಡೆಯಲಿದ್ದು, ಎಲ್ಲ ಬೂತ್‌ಗಳಲ್ಲಿ ರಂಗೋಲಿ ಹಾಕಿ, ಕಮಲ ದೀಪ ಹಚ್ಚಲಿದ್ದಾರೆ. ಇದರಲ್ಲಿ 8 ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ರಾಜ್ಯ ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಸಂವಾದ: ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಬೂತ್ ಕಾರ್ಯಕರ್ತರೊಂದಿಗೆ ಇದೇ 28ರಂದು ಏಕಕಾಲಕ್ಕೆ ಸಂವಾದ ನಡೆಸಲಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ 1,000 ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗುತ್ತದೆ. ಸುಮಾರು 2.50 ಲಕ್ಷ ಕಾರ್ಯಕರ್ತರು ಬೆಳಿಗ್ಗೆ 11ಕ್ಕೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
**
ಮುಖ್ಯಾಂಶಗಳು
*21ರಂದು ಮಧ್ಯಾಹ್ನ 3.45ಕ್ಕೆ 3,000 ಶಕ್ತಿ ಕೇಂದ್ರ ಪ್ರಮುಖರ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಷಣ
*ಸಂಜೆ 5.45ಕ್ಕೆ ರಾಜ್ಯದ ಸಂಸದರು ಹಾಗೂ ಶಾಸಕರ ಜತೆಗೆ ಸಮಾಲೋಚನೆ
*ರಾತ್ರಿ 7.15ಕ್ಕೆ ರಾಜ್ಯ ಸಮಿತಿಯ ಪ್ರಮುಖರ ಜತೆಗೆ ಚರ್ಚೆ
*ರಾತ್ರಿ 9ಕ್ಕೆ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.