ಬೆಂಗಳೂರು: ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ಗೆ ಸೇರಿದ ಇಲ್ಲಿನ ಎರಡು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಎಫ್‌ಇಎಂಎ) ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಚೇರಿಗಳ ಮೇಲೆ ದಾಳಿ ಮಾಡಿ,
ದಾಖಲೆಗಳನ್ನು ಶೋಧಿಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಫ್‌ಸಿಆರ್‌ಎ) ನೋಂದಣಿ ನಿರಾಕರಿಸಿದ ಬಳಿಕ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಪ್ರೈವೇಟ್ ಲಿ. ಹೆಸರಿನಲ್ಲಿ ವಾಣಿಜ್ಯ ಕೇಂದ್ರ ಸ್ಥಾಪಿಸಿತ್ತು. ಈ ಸಂಸ್ಥೆ ಇದುವರೆಗೆ ₹ 36 ಕೋಟಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದೆ. ಇದರಲ್ಲಿ ₹ 10 ಕೋಟಿಯನ್ನು ದೀರ್ಘಾವಧಿ ಸಾಲವಾಗಿ ಪಡೆಯಲಾಗಿದೆ.
ಈ ₹10 ಕೋಟಿಯನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿದೆ. ಇದನ್ನು ಖಾತರಿಯಾಗಿ ಕೊಟ್ಟು ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಟ್ರಸ್ಟ್ ಹೆಸರಿನಲ್ಲಿ₹ 14.25 ಕೋಟಿ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲಾಗಿದೆ. ಉಳಿದ ₹ 26 ಕೋಟಿ ಎಐಐಪಿಎಲ್‌ನ ಎರಡು ಖಾತೆಗಳಿಗೆ ಜಮಾ ಆಗಿದೆ. ಇದನ್ನು ಕನ್ಸಲ್ಟೆನ್ಸಿ ಸರ್ವಿಸಸ್ ಹೆಸರಿನಲ್ಲಿ ಸ್ವೀಕರಿಸಲಾಗಿದೆ. ಇದು ವಿದೇಶಿ ಹಣ ನೇರ ಹೂಡಿಕೆ ನಿಯಮಗಳ ಉಲ್ಲಂಘಿಸಿರುವ ಸಾಧ್ಯತೆಗಳಿವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.