ಶಿರಸಿ: ‘ದಾರಿ ತಪ್ಪಿ ಗೃಹ ಸಚಿವರಾದವರು ಎಂ.ಬಿ.ಪಾಟೀಲ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬುಧವಾರ ಇಲ್ಲಿ ಲೇವಡಿ ಮಾಡಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೆಗಡೆ ನಾಲಿಗೆ ಹರಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎನ್ನುವ ಎಂ.ಬಿ ಪಾಟೀಲ ಈವರೆಗೆ ಎಲ್ಲಿದ್ದರು, ಹೇಗಿದ್ದರು ಎಂಬುದೇ ಗೊತ್ತಿರಲಿಲ್ಲ’ ಎಂದರು.
‘ನಾನು ಪ್ರಧಾನ ಮಂತ್ರಿಯಾದರೆ ಅನಂತಕುಮಾರ್ ಹೆಗಡೆಯನ್ನು ಜೈಲಿಗೆ ಕಳುಹಿಸುತ್ತಿದ್ದೆ’ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಅನಂತಕುಮಾರ್, ‘ಸಿದ್ದರಾಮಯ್ಯನವರ ಆತ್ಮವಿಶ್ವಾಸಕ್ಕೆ ತಲೆ ಬಾಗುತ್ತೇನೆ. ಅವರಿಗೆ ಪ್ರಧಾನ ಮಂತ್ರಿ ಆಗಲು ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಾಗಿದೆ. ನನ್ನ ಜೈಲಿಗೆ ಹಾಕೋಕೆ ಆಗಲ್ಲ ಅನ್ನುವುದೂ ಅವರಿಗೆ ಅರ್ಥ ಆಗಿದೆ’ ಎಂದರು.
ನೂರು ಕೋಟಿ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ತೊಡಕಾಗಿದ್ದಾರೆ. ನ್ಯಾಯಾಲಯದ ವಿಚಾರದಲ್ಲಿ ಪದೇ ಪದೇ ರಿಟ್ ಸಲ್ಲಿಸಿ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಹಿಂದೂ ಧರ್ಮೀಯರು ಸಂವಿಧಾನವನ್ನು ಗೌರವಿಸುವ ಕಾರಣಕ್ಕೆ ಮಂದಿರ ನಿರ್ಮಾಣ ವಿಚಾರದಲ್ಲಿ ಕಾನೂನು ಮೀರಿಲ್ಲ. ಆದರೆ ನೂರು ಕೋಟಿ ಭಕ್ತರ ಶ್ರದ್ಧೆಯನ್ನು ಬಹಳ ದಿನ ತಡೆಯಲು ಸಾಧ್ಯವಿಲ್ಲ.
ಸುಗ್ರೀವಾಜ್ಞೆ ಹೊರ ಬಂದ ಗಳಿಗೆಯಲ್ಲಿ ಸಂವಿಧಾನದ ಗೆರೆ ದಾಟಲೇ ಬೇಕಾಗುತ್ತದೆ. ಪುಕ್ಕಲು ನಾಯಕತ್ವಕ್ಕೆ ಹೆದರಿಕೆ ಸ್ವಾಭಾವಿಕ. ಆದರೆ ಇಂದು ದೇಶದ ನಾಯಕರು ಆತ್ಮವಿಶ್ವಾಸ ಹೊಂದಿದ್ದಾರೆ. ಪಾಕಿಸ್ತಾನ ಒಂದೇ ಅಲ್ಲ, ಅದರ ಜೊತೆಗೆ ಚೀನಾ ಹಾಗೂ ಬಾಂಗ್ಲಾದೇಶ ಕೂಡ ಏಕಕಾಲದಲ್ಲಿ ಯುದ್ಧಕ್ಕೆ ನಿಂತರೂ ಬಗ್ಗು ಬಡಿಯುವ ಸೈನ್ಯಶಕ್ತಿ ಭಾರತದಲ್ಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.