ಸುಂಟಿಕೊಪ್ಪ (ಕೊಡಗು ಜಿಲ್ಲೆ): ‘ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಥವರ ಕೈತೆಗೆದು ಇತಿಹಾಸ ನಿರ್ಮಿಸಬೇಕು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆಅವರು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದುವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದಲ್ಲಿ ಕಲ್ಲುಕೋರೆಯ ಚೌಡಿಯಮ್ಮ ಮತ್ತು ಗುಳಿಗಪ್ಪ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಕೃತಿ ವಿಕೋಪದಿಂದ ಈ ದೇವಾಲಯಗಳು ಹಾನಿಗೆ ಒಳಗಾಗಿದ್ದವು. ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಹಾಗೂ ಹಿಂದೂ ಜಾಗರಣಾ ವೇದಿಕೆಯಿಂದ ಈ ದೇವಸ್ಥಾನಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಕೇಂದ್ರ ಸಚಿವರು ವಿವಾದ ಎಬ್ಬಿಸಿದರು.
‘ಮಸೀದಿಗಳು ಬಿದ್ದರೆ ರಾಜ್ಯ ಸರ್ಕಾರದ ಮಂತ್ರಿಗಳು ಓಡಿ ಬರುತ್ತಾರೆ. ಮರು ನಿರ್ಮಾಣಕ್ಕೂ ಅನುದಾನ ನೀಡುತ್ತಾರೆ. ಅದೇ ಹಿಂದೂಗಳ ದೇವಸ್ಥಾನಗಳು ಬಿದ್ದರೆ ಯಾರೂ ತಿರುಗಿ ನೋಡುವುದಿಲ್ಲ. ಹಿಂದೂ ಸಂಘಟನೆಗಳೇ ದುರಸ್ತಿ ಮಾಡಿಕೊಳ್ಳುವ ಸ್ಥಿತಿಯಿದೆ’ ಎಂದು ಆಕ್ರೋಶ ಭರಿತವಾಗಿ ನುಡಿದರು.
ದೇವರಿಗೆ ಕುರಿ, ಕೋಳಿ ಬಲಿ ನೀಡಲಾಗುತ್ತಿದೆ. ಆನೆ, ಹುಲಿಯನ್ನು ಬಲಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ದೇವರಿಗೆ ದುರ್ಬಲರೇ ಬೇಕು. ನೀವು ಕುರಿ, ಕೋಳಿ ಆಗದೇ ಶ್ರೌರ್ಯ ವ್ಯಕ್ತಿಗಳಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಮ್ಯುನಿಸ್ಟರ ವಿರುದ್ಧವೂ ವಾಗ್ದಾಳಿ: ‘ಕಮ್ಯುನಿಸ್ಟರು ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯಮಂತ್ರಿಯೇ ಅಲ್ಲ. ಧರ್ಮ ದ್ರೋಹಿಯ ಪ್ರತಿನಿಧಿ’ ಎಂದು ವಾಗ್ದಾಳಿ ನಡೆಸಿದರು.
‘ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶದ ವಿಚಾರದಲ್ಲಿ ಇಬ್ಬರು ಮಹಿಳೆಯರು ಕೊಡಗನ್ನು ದುರ್ಬಳಕೆ ಮಾಡಿಕೊಂಡರು. ಇನ್ಮುಂದೆ ಈ ರೀತಿ ಆಗಬಾರದು. ಅದು ನಡೆದರೆ ಇಲ್ಲಿಯೇ ಮಣ್ಣಾಗಬೇಕು’ ಎಂದು ಕರೆ ನೀಡಿದರು.
‘ಮುಂದೊಂದು ದಿನ ಕೊಡಗು ಉಳಿಯುವುದಿಲ್ಲ. ಕೊಡಗಿನ ಗುರುತಾದ ವೀರತ್ವ ಮತ್ತೆ ಎದ್ದು ನಿಲ್ಲಬೇಕು. ಇಲ್ಲದಿದ್ದರೆ ಮಸೀದಿ, ಚರ್ಚ್‌ಗಳು ತಲೆಯೆತ್ತಲಿವೆ’ ಎಂದು ಎಚ್ಚರಿಸಿದರು.
‘ವಿಶ್ವ ಪ್ರಸಿದ್ಧ ಪ್ರೇಮ ಸ್ಮಾರಕ ತಾಜ್‌ಮಹಲ್ ಅನ್ನು ಷಾಜಹಾನ್ ನಿರ್ಮಿಸಿದ್ದಲ್ಲ. ಹಿಂದೆ ತೇಜೋಮಹಲ್ ಆಗಿತ್ತು. ರಾಜ ಜಯಸಿಂಹನಿಂದ ಷಾಜಹಾನ್ ಖರೀದಿಸಿದ್ದ ಅಷ್ಟೇ. ಈ ವಿಚಾರವನ್ನು ಷಾಜಹಾನ್ ಹೇಳಿದ್ದ’ ಎಂದು ಹೆಗಡೆನುಡಿದರು.
ಹಿಂದೂ ಜಾಗರಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.
***
ಕೊಡಗಿನಲ್ಲಿ ದೇಶದ್ರೋಹದ ಕೆಲಸಗಳು ನಡೆಯುತ್ತಿವೆ. ನಕ್ಸಲರು, ದೇಶದ್ರೋಹಿಗಳಂಥ ದುಷ್ಟರು ಇಲ್ಲಿ ನೆಲೆಸಿದ್ದಾರೆ. ಜಿಲ್ಲೆಯ ಜನರು ಮಾತ್ರ ಜ್ವಾಲಾಮುಖಿ ಮೇಲೆ ನಿಂತಿದ್ದಾರೆ.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.