ಶಿರಸಿ: ಹಿಂದಿನ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದೆ.
2017ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಸ್ಥಾನವನ್ನು ಅನಂತಕುಮಾರ ಹೆಗಡೆ ಅವರಿಗೆ ನೀಡಲಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಕ್ಷೇತ್ರದ ಸಂಸದರೊಬ್ಬರಿಗೆ ಸಚಿವ ಸ್ಥಾನ ಸಿಕ್ಕಿದ್ದನ್ನು ಕ್ಷೇತ್ರದ ಜನರು ಸಂಭ್ರಮಿಸಿದ್ದರು.
‘ಸಚಿವರಾದ ಮೇಲೆ ಹೆಗಡೆ ನೀಡಿದ ಅನೇಕ ವಿವಾದಾತ್ಮಕ ಹೇಳಿಕೆಗಳೇ ಅವರಿಗೆ ಸಚಿವ ಸ್ಥಾನ ತಪ್ಪಲು ಕಾರಣವಾಗಿರಬಹುದು. ಸಂವಿಧಾನ ಬದಲಿಸುವ ಸಂಬಂಧ ನೀಡಿದ್ದ ಹೇಳಿಕೆ ಪಕ್ಷ ಸಂಘಟನೆಗೆ ತೀವ್ರ ಹೊಡೆತಕೊಟ್ಟಿತು. ಪರಿಶಿಷ್ಟ ಮೋರ್ಚಾ ಕಾರ್ಯಕರ್ತರು ರಾಜ್ಯ ಘಟಕದ ಸಭೆಯಲ್ಲಿ ನೇರವಾಗಿ ಅನಂತಕುಮಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.
ಮಹಾತ್ಮ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆಗೆ ಟ್ವೀಟ್ ಮಾಡಿದ್ದ ಅನಂತಕುಮಾರ್ ಬರಹಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮೋದಿ ಅವರು ‘ಪ್ರಜ್ಞಾ ಸಿಂಗ್ ಅವರನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿಕೆ ನೀಡಿದ್ದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ‘ನಾಯಕರ ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಹೇಳಿ ಪಕ್ಷಕ್ಕಾದ ಇರಿಸುಮುರಿಸನ್ನು ತಪ್ಪಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.