ಮಂಗಳೂರು: ‘ನನ್ನನ್ನು ಬೆಳೆಸಿದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ’ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್ ಲೋಡ್ ಮಾಡಿರುವ ಅವರು, ‘ಸೆ.24 ನನ್ನ ಜೀವನದ ಯಾವ ಘಟ್ಟದಲ್ಲೂ ನೆನಪಿಸಿಕೊಳ್ಳಲು ಇಷ್ಟಪಡದಿರುವ ದಿನ. 12 ವರ್ಷದ ಹಿಂದೆ ಒಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಾಗ, ಮುಂದೆ ಆ ದಿನ ನನ್ನ ಜೀವನದಲ್ಲಿ ಮುಳ್ಳಾಗಿ ಬರಲಿದೆ ಎಂದು ಅಂದುಕೊಂಡಿರಲಿಲ್ಲ’ ಎಂದಿದ್ದಾರೆ.
‘ನೋಟಿಸ್ ಬಂದಿದ್ದು ನೋವಾಗಿಲ್ಲ. ಸಿಸಿಬಿ ವಿಚಾರಣೆಗೆ ಹೋಗ ಮಾತ್ರಕ್ಕೆ ನಾನು ಅಪರಾಧಿ ಆಗಲ್ಲ. ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿಯಿಂದ ನೋವಾಗಿದೆ. ಅಂತೆ ಕಂತೆಗಳಿಂದ ನನ್ನ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ’ ಎಂದು ಕಣ್ಣೀರಿಟ್ಟಿದ್ದಾರೆ.
‘ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಮಾಡುವ ಮೊದಲು ನನ್ನ ಕುಟುಂಬದವರ ಬಗ್ಗೆ ಒಮ್ಮೆ ಯೋಚಿಸಿ. ಅದಾಗ್ಯೂ ನನ್ನ ಬೆಂಬಲಕ್ಕೆ ನಿಂತಿರುವ ಎಲ್ಲರಿಗೂ ಕೃತಜ್ಞತೆ’ ಎಂದು ಹೇಳಿದ್ದಾರೆ.
ಮೂವರು ‘ಪ್ರಭಾವಿ’ಗಳಿಗೆ ಕರೆ ಮಾಡಿದ್ದ ಅನುಶ್ರೀ
ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ನಟಿ, ನಿರೂಪಕಿ ಅನುಶ್ರೀ, ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿವೆ.
ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಅನುಶ್ರೀ ಅವರ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಅನುಶ್ರೀ ಅವರು ನೋಟಿಸ್ ಬಂದ ನಂತರ ಮೂವರು ರಾಜಕಾರಣಿಗಳಿಗೆ ಕರೆ ಮಾಡಿರುವುದು ಪತ್ತೆಯಾಗಿದೆ. ಇವರು ಮೂರೂ ಪಕ್ಷಗಳಿಗೆ ಸೇರಿದ ಪ್ರಭಾವಿ ನಾಯಕರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸಿರುವ ಸಿಸಿಬಿ ಪೊಲೀಸರು, ‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮುಂದೆ ಅಗತ್ಯ ಮಾಹಿತಿಗಳನ್ನು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.