ADVERTISEMENT

ಹಳಗನ್ನಡವನ್ನು ಬಿಟ್ಟು ಯಾರು ದೊಡ್ಡವರಾಗಿದ್ದಾರೆ?

ಹಳಗನ್ನಡದ ಉಪಯುಕ್ತತೆ ಬಗ್ಗೆ ಪ್ರಶ್ನಿಸುವವರಿಗೆ ಸಮ್ಮೇಳನಾಧ್ಯಕ್ಷ ಷ. ಶೆಟ್ಟರ್‌ ಮರುಪ್ರಶ್ನೆ

ಚ.ಹ.ರಘುನಾಥ
Published 25 ಜೂನ್ 2018, 20:11 IST
Last Updated 25 ಜೂನ್ 2018, 20:11 IST
ಪಂಪನ ಆದಿಪುರಾಣ ಕಾವ್ಯದ ತಾಳೆಗರಿ ಪ್ರತಿಯನ್ನು ವೇದಿಕೆ ಮೇಲೆ ಅನಾವರಣಗೊಳಿಸುವ ಮೂಲಕ ಹಳಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ, ಮಲ್ಲೇಪುರಂ ಜಿ.ವೆಂಕಟೇಶ್‌, ಸಿಪಿಕೆ, ಮನು ಬಳಿಗಾರ್‌, ಹಂಪ ನಾಗರಾಜಯ್ಯ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಷ.ಶೆಟ್ಟರ್‌, ಪ್ರೇಮಲತಾ ಶೆಟ್ಟರ್‌ ಹಾಗೂ ಚಂಪಾ ಇದ್ದರು
ಪಂಪನ ಆದಿಪುರಾಣ ಕಾವ್ಯದ ತಾಳೆಗರಿ ಪ್ರತಿಯನ್ನು ವೇದಿಕೆ ಮೇಲೆ ಅನಾವರಣಗೊಳಿಸುವ ಮೂಲಕ ಹಳಗನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಶಾಸಕ ಸಿ.ಎನ್‌.ಬಾಲಕೃಷ್ಣ, ಮಲ್ಲೇಪುರಂ ಜಿ.ವೆಂಕಟೇಶ್‌, ಸಿಪಿಕೆ, ಮನು ಬಳಿಗಾರ್‌, ಹಂಪ ನಾಗರಾಜಯ್ಯ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಷ.ಶೆಟ್ಟರ್‌, ಪ್ರೇಮಲತಾ ಶೆಟ್ಟರ್‌ ಹಾಗೂ ಚಂಪಾ ಇದ್ದರು   

ಚಾವುಂಡರಾಯ ಮಂಟಪ (ಶ್ರವಣಬೆಳಗೊಳ): ‘ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಂ ಧರ್ಮಮುಂ…’ ಎನ್ನುವ ಕವಿರಾಜ ಮಾರ್ಗಕಾರನ ಸಾಲುಗಳನ್ನು ಚಿನ್ನದ ಅಕ್ಷರಗಳಲ್ಲಿ ಬರೆಸಿ ನಮ್ಮ ರಾಜಕೀಯ ಕಾರ್ಯಕರ್ತರಿಗೆ ಹಾಗೂ ಗುಂಡಿ
ಕ್ಕುವವರಿಗೆ ಕಳಿಸಿಕೊಡಬೇಕು ಎಂದು ಷ. ಶೆಟ್ಟರ್‌ ಹೇಳಿದರು.

‘ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನ’ದಲ್ಲಿ ಸೋಮವಾರ ಅಧ್ಯಕ್ಷ ಭಾಷಣ ಮಾಡಿದ ಅವರು, ‘ಹಳಗನ್ನಡ ನಮಗೆ ಏಕೆ ಬೇಕು ಎನ್ನುವ ಪ್ರಶ್ನೆಗೆ ಅರ್ಥವಿಲ್ಲ’ ಎಂದು ಹೇಳುತ್ತಲೇ, ಹಳಗನ್ನಡದ ಅನನ್ಯತೆಯನ್ನು ಕಟ್ಟಿಕೊಡುವ ಹಲವು ನಿದರ್ಶನಗ
ಳನ್ನು ನೀಡಿದರು. ಲಿಖಿತ ಭಾಷಣವನ್ನು ಪಕ್ಕಕ್ಕಿಟ್ಟು ಸುಮಾರು ಒಂದು ಗಂಟೆ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ಹಳಗನ್ನಡದ ಸಾಧ್ಯತೆಗಳು ಹಾಗೂ ಸಂಶೋಧಕನಿಗೆ ಇರಬೇಕಾದ ವಿನಯ–ವಿವೇಕದ ಕುರಿತ ಒಳನೋಟಗಳನ್ನು ಹಂಚಿಕೊಂಡರು.

‘ಸಮಾಜದ ಪ್ರಜ್ಞೆಯನ್ನು ಜಾಗೃತಗೊಳಿಸಲಿಕ್ಕಾಗಿ ಸಾಹಿತ್ಯ–ಕಾವ್ಯ ಬೇಕು. ಇಂದಿನ ಸಮಾಜಕ್ಕೆ ಅತ್ಯಗತ್ಯವಾದ ಬಹುತ್ವ, ಸಹಿಷ್ಣುತೆ, ಸಾಮರಸ್ಯದ ಕುರಿತು ಕನ್ನಡದ ಮೊದಲ ಕೃತಿ ಚರ್ಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು. ‘ಹಳಗನ್ನಡವನ್ನು ಬಿಟ್ಟು ಹೊಸಗನ್ನಡದಲ್ಲಿ ಯಾರು ದೊಡ್ಡವರಾಗಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

ಹಳಗನ್ನಡವನ್ನು ಎಲ್ಲರೂ ಓದಬೇಕಿಲ್ಲ. ಹಾಗೆ ಓದುವ ಅವಶ್ಯಕತೆಯೂ ಇಲ್ಲ. ಹಳಗನ್ನಡದಲ್ಲಿ ಅಭಿರುಚಿ ಇರುವವರಷ್ಟೇ ಅದನ್ನು ಓದಬಹುದು. ಹಳಗನ್ನಡವನ್ನು ಓದದಿದ್ದರೆ ಓದದವರಿಗೆ ನಷ್ಟವೇ ಹೊರತು, ಸಾಹಿತ್ಯಕ್ಕಲ್ಲ ಎಂದರು.

ವೈಭವೀಕರಣ ಅನಗತ್ಯ: ಹಳಗನ್ನಡದ ವೈಭವೀಕರಣಕ್ಕೆ ಅರ್ಥವಿಲ್ಲ. ಹಳತಾದಷ್ಟೂ ಪರಂಪರೆ ಶ್ರೇಷ್ಠ ಎನ್ನುವುದು ಸರಿಯಲ್ಲ. ಬಾಲಗಂಗಾಧರ ತಿಲಕರು ವೇದಗಳ ಕಾಲವನ್ನು ಸಾವಿರಾರು ವರ್ಷಗಳ ಹಿಂದಕ್ಕೆ ಕರೆದೊಯ್ದರು. ಅವರಿಗೆ ತಾವು ಹೇಳುವುದು ತಪ್ಪೆನ್ನುವುದು ಗೊತ್ತಿತ್ತು. ಆದರೆ, ಸ್ವಾತಂತ್ರ್ಯಪೂರ್ವ ಸಂದರ್ಭದಲ್ಲಿ ಭಾರತೀಯರಿಗೆ ತಮ್ಮ ಪರಂಪರೆಯ ಬಗ್ಗೆ ಸ್ಫೂರ್ತಿ ತುಂಬಲಿಕ್ಕಾಗಿ ಹಾಗೆ ಹೇಳುವುದು ಅವರಿಗೆ ಅಗತ್ಯವಾಗಿತ್ತು ಎಂದ ಶೆಟ್ಟರ್, ‘ಗತವೈಭವಗಳನ್ನು ಬರೆಯುವವರಿಂದ ಶೈಕ್ಷಣಿಕ ಶಿಸ್ತು ನಿರೀಕ್ಷಿಸಬಾರದು’ ಎಂದು ಕಿವಿಮಾತು ಹೇಳಿದರು.

‘ಪೂರ್ವಸೂರಿಗಳು ತಪ್ಪು ಮಾಡುವ ಹಕ್ಕು ಹೊಂದಿರುತ್ತಾರೆ. ಅವರಿಗೆ ಸಿದ್ಧ ದಾರಿಗಳು ಇಲ್ಲವಾದುದರಿಂದ, ತಮ್ಮದೇ ದಾರಿ ಮಾಡಿಕೊಂಡು ಮುಂದುವರೆಯುತ್ತಾರೆ’ ಎಂದು ಸಂಶೋಧಕನಿಗೆ ಅಗತ್ಯ
ವಾದ ವಿಮರ್ಶಾ ವಿವೇಕ ಹಾಗೂ ವಿನಯದ ಕುರಿತು ಉದಾಹರಣೆಗಳನ್ನು ನೀಡಿದರು. ಸಂಶೋಧನೆಯ ಜೊತೆಜೊತೆಗೆ ಸಂಸ್ಕೃತಿ ಹಾಗೂ ಮನೋವೃತ್ತಿ ಎರಡೂ ಬದಲಾಗುತ್ತವೆ. ಹೊಸ ಜ್ಞಾನ ಬಂದಾಗ ತಪ್ಪನ್ನು ತಿದ್ದಿಕೊಳ್ಳಬೇಕೇ ಹೊರತು, ಹಳಬರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದರು.

ಹಲ್ಮಿಡಿ ಮೊದಲಲ್ಲ: ಹಲ್ಮಿಡಿ ಶಾಸನವನ್ನು ಕನ್ನಡದ ಮೊದಲ ಶಾಸನ ಎನ್ನುವುದು ಸರಿಯಲ್ಲ. ಕ್ರಿ.ಶ. 450 ಎನ್ನುವ ಅದರ ಕಾಲನಿರ್ಣಯಕ್ಕೂ ಆಧಾರಗಳಿಲ್ಲ. ಹಲ್ಮಿಡಿ ಶಾಸನದ ವೇಳೆಗಾಗಲೇ ಪ್ರಬುದ್ಧ ಕನ್ನಡವಿತ್ತು. ಗ್ರೀಕ್ ಪ್ರಹಸನದ ಹಿನ್ನೆಲೆಯಲ್ಲಿ 2ನೇ ಶತಮಾನದಲ್ಲೇ ಕನ್ನಡದ ಪದಗಳನ್ನು ಗುರುತಿಸುವ ಗೋವಿಂದ ಪೈ ಅವರ ನಿರ್ಣಯವನ್ನೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ವಡ್ಡಾರಾಧನೆಯ ಕಾಲ ಕ್ರಿ.ಶ. 600 ಎನ್ನುವುದೂ ಸರಿಯಲ್ಲ. ಗೋವಿಂದ ಪೈ ಅವರ ಬಗ್ಗೆ ಗೌರವ ಇಟ್ಟುಕೊಂಡೇ ಇಂಥ ತಕರಾರುಗಳನ್ನು ನಾವು ಎತ್ತಬೇಕಾಗಿದೆ ಎಂದರು.

19ನೇ ಶತಮಾನದಲ್ಲಿ ಕನ್ನಡದ ಪುನರುತ್ಥಾನ ಪ್ರಾರಂಭವಾಯಿತು. ಅದಕ್ಕೆ ಮೊದಲು ‘ಕನ್ನಡ’ದ ಪ್ರಜ್ಞೆ ಇರಲಿಲ್ಲ. ಹಳಗನ್ನಡದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಪಂಪ, ರನ್ನ, ನಾಗವರ್ಮರ ಶೋಧದ ಮೂಲಕ ಕನ್ನಡದ ಅರಿವು ರೂಪುಗೊಂಡಿತು ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.

ಅನುವಾದದ ಹೊಣೆಗಾರಿಕೆ: ನಮ್ಮ ಕಥೆಗಳನ್ನು ಕನ್ನಡೇತರರಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಹಳಗನ್ನಡವನ್ನು ಹೊಸಗನ್ನಡಕ್ಕೆ ಭಾಷಾಂತರಿಸಬೇಕಿದೆ. ಹೊಸಗನ್ನಡವನ್ನು ಇಂಗ್ಲಿಷ್‌ಗೆ, ಇಂಗ್ಲಿಷ್ ಮೂಲಕ ವಿಶ್ವದ ವಿವಿಧ ಭಾಷೆಗಳಿಗೆ ಭಾಷಾಂತರಿಸುವ ಕೆಲಸವನ್ನು ಆದ್ಯ ಕರ್ತವ್ಯವೆಂದು ತಿಳಿಯಬೇಕು. ಈ ಅನುವಾದ ಸಾಧ್ಯವಾದಾಗ ‘ಹಳಗನ್ನಡ ಏಕೆ ಪ್ರಸ್ತುತ’ ಎನ್ನುವ ಪ್ರಶ್ನೆ ಎಷ್ಟು ಮೂರ್ಖ
ತನದ್ದೆಂದು ತಿಳಿಯುತ್ತದೆ ಎಂದರು.

***

ಛಂದಸ್ಸನ್ನು ಹೇರಿ ಕಾವ್ಯ ಓದಲು ಹೇಳಿದರೆ, ಕಾವ್ಯ ಸಾಯುತ್ತದೆ. ಕಾವ್ಯದ ರುಚಿ ಹತ್ತಿದರೆ ಛಂದಸ್ಸಿನ ಬಗ್ಗೆಯೂ ಕುತೂಹಲ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟ ಶೆಟ್ಟರ್‌, ತಿಳಿಗನ್ನಡದ ಕಾವ್ಯಗಳ ಮೂಲಕ ತಮ್ಮ ಹಳಗನ್ನಡ ಆಸಕ್ತಿ ಶುರುವಾದುದನ್ನು ನೆನಪಿಸಿಕೊಂಡರು.

ನನ್ನ ಜೀವನದ 40–45ನೇ ವಯಸ್ಸಿನವರೆಗೆ ಹಳಗನ್ನಡದ ಬಗ್ಗೆ ವಿಶೇಷ ಆಸಕ್ತಿಯಿರಲಿಲ್ಲ. ಪರಿಷತ್ತು ಪ್ರಕಟಿಸಿದ ಹಳಗನ್ನಡ, ನಡುಗನ್ನಡ ಕಾವ್ಯಗಳ ಅನುವಾದ ಕೃತಿಗಳ ಮೂಲಕ ನನ್ನ ಹಳಗನ್ನಡದ ಓದು ಪ್ರಾರಂಭವಾಯಿತು ಎಂದರು.

ಜಿ. ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಮುದ್ರಣಗೊಂಡಿದ್ದ ಆ ಕೃತಿಗಳನ್ನು ಮರು ಮುದ್ರಿಸಬೇಕು ಎನ್ನುವ ಸಿ.ಪಿ. ಕೃಷ್ಣಕುಮಾರ್‌ ಅವರ ಆಗ್ರಹಕ್ಕೆ ಶೆಟ್ಟರ್‌ ಕೂಡ ದನಿಗೂಡಿಸಿದರು.

ಪಂಪ್‌ ಅಂಡ್‌ ರನ್‌

ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕವಿ ಚಂದ್ರಶೇಖರ ಪಾಟೀಲರು ಪಂಪನೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ‘ಪಂಪನ ಹೆಸರಲ್ಲಿ ಪ್ರಶಸ್ತಿ ಹೊಡ್ಕೋತಿ. ಆದರೆ ಪಂಪನ ಬಗ್ಗೆ ಏನೋ ಗೊತ್ತಿಲ್ಲ ಅಂತಿ. ನಾಚಿಕೆ ಆಗೊಲ್ಲವಾ’ ಎಂದು ಗೆಳೆಯರೊಬ್ಬರು ಪ್ರಶ್ನಿಸಿದ್ದನ್ನು ನೆನಪಿಸಿಕೊಂಡ ಅವರು, ‘ನನಗೆ ಪಂಪನ ಒಂದಷ್ಟು ಕೊಟೇಷನ್ ಗೊತ್ತು’ ಎಂದು ಹೇಳಿದ್ದನ್ನು ತಮಾಷೆಯಾಗಿ ನೆನಪಿಸಿಕೊಂಡರು.

ಪಂಪ–ರನ್ನರನ್ನು ಓದಿಕೊಂಡ ಮಾತ್ರಕ್ಕೆ ಘನವಾಗುತ್ತೇನೆ ಎನ್ನುವ ಭ್ರಮೆ ಬೇಡ ಎಂದು ಹೇಳಿದ ಚಂಪಾ, ಕಾನ್ವೆಂಟ್‌ ಕಂದನ ಬಾಯಲ್ಲಿ ಪಂಪ ಮತ್ತು ರನ್ನ ‘ಪಂಪ್‌ ಅಂಡ್‌ ರನ್‌’ ಆದ ದುರಂತರ ಕುರಿತ ತಮ್ಮ ಪದ್ಯವನ್ನು ವಾಚಿಸಿದರು.

ಹಳಗನ್ನಡದಲ್ಲಿ ಮಾತು!

ಹಂಪ ನಾಗರಾಜಯ್ಯನವರು ತಮ್ಮ ಆಶಯ ಭಾಷಣದ ಮಾತುಗಳನ್ನು ಹಳಗನ್ನಡದಲ್ಲಿ ಆಡಿದ್ದು ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು. ‘ನಾಡಿನ ಸಿರಿಯನ್ನೆಲ್ಲ ಪೊಟ್ಟಣಗಟ್ಟಿದರೂ ಬೆಲೆಗಟ್ಟಲಾಗದ ತವನಿಧಿ ಹಳಗನ್ನಡ’ ಎಂದು ಬಣ್ಣಿಸಿದ ಅವರು, ‘ಕನ್ನಡ ಕೊರಳ ಭಾಷೆಯಾದರೆ ಸಾಲದು, ಕರುಳ ಭಾಷೆಯಾಗಬೇಕು ಎಂದು ಆಶಿಸಿದರು.

ಪಂಪನ ‘ಆದಿಪುರಾಣ’ ಕಾವ್ಯದ ತಾಳೆಗರಿಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ತಂದು ವೇದಿಕೆಯಲ್ಲಿ ರಚಿಸಲಾದ ವಿಶೇಷ ಪೀಠದಲ್ಲಿ ಇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದ್ದು ಉದ್ಘಾಟನಾ ಕಾರ್ಯಕ್ರಮದ ವಿಶೇಷವಾಗಿತ್ತು.

ಅಡಿಗೆರೆಯ ಮಾತು


ರನ್ನ ಮತ್ತು ಕುಮಾರವ್ಯಾಸ ಪಂಪನ ಎರಡು ಶ್ವಾಸಕೋಶಗಳು.

–ಹಂಪನಾ

ಸಾಹಿತ್ಯ ಪರಿಷತ್ತು ಜನಸಾಮಾನ್ಯರ ವಿಶ್ವವಿದ್ಯಾಲಯ. ಪುಸ್ತಕಗಳನ್ನು ಮುಟ್ಟುವ, ಮೇಯುವ ಹಾಗೂ ಜೀರ್ಣಿಸಿಕೊಳ್ಳುವ ಕೆಲಸ ಸ್ವಲ್ಪ ಹಿಂದೆಬಿದ್ದಿದೆ. ಪುಸ್ತಕ ಸಂಸ್ಕೃತಿ ರಕ್ಷಿಸುವ ಕೆಲಸವನ್ನು ಕಸಾಪ ಮಾಡಬೇಕು.

–ಸಿ.ಪಿ.ಕೆ

ನಾವು ಮಾತನಾಡುವ ಕನ್ನಡದಲ್ಲಿ ಪಂಪ, ರನ್ನ, ನಾಗಚಂದ್ರ, ನೇಮಿಚಂದ್ರ ಇದ್ದಾರೆ.

–ಮಲ್ಲೇಪುರಂ ಜಿ. ವೆಂಕಟೇಶ್

ಕುಮಾರವ್ಯಾಸನಿಗಿಂತಲೂ ಪಂಪ ಹೆಚ್ಚು ಜಾನಪದ ಸಂವೇದನೆಯ ಕವಿ. ಜಾತಿಯ ಸಮಸ್ಯೆಯನ್ನು ಪಂಪನಷ್ಟು ಧೈರ್ಯದಿಂದ ನಿಭಾಯಿಸುವುದು ಇಂದಿಗೂ ಕಷ್ಟ.

–ಕೆ.ಆರ್‌. ದುರ್ಗಾದಾಸ್

ಕನ್ನಡದ ಮೊದಲ ಪದ ‘ಇಸಿಲ’ ಎಂದು ಈವರೆಗೆ ನಂಬಲಾಗಿತ್ತು. ಇಸಿಲ ಪ್ರಾಕೃತದ ಪದ ಎನ್ನುವುದನ್ನು ಶೆಟ್ಟರ್‌ ಅವರು ತಮ್ಮ ‘ಪ್ರಾಕೃತ ಜಗದ್ವಲಯ’ ಕೃತಿಯಲ್ಲಿ ಸಾಬೀತುಮಾಡಿದ್ದಾರೆ.

–ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಹಳಗನ್ನಡದ ಪಠ್ಯಗಳನ್ನು ಅಂತರ್ಜಾಲಕ್ಕೆ ಸೇರಿಸುವ ಮೂಲಕ ಅವುಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು. ಇಲ್ಲದೆ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ.

–ಪುರುಷೋತ್ತಮ ಬಿಳಿಮಲೆ

ಧರ್ಮ ಏಕವನ್ನು ಹುಡುಕಿದರೆ, ಕಾವ್ಯ ಅನೇಕವನ್ನು ಹುಡುಕುತ್ತದೆ.

–ಗೀತಾ ವಸಂತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.