ಕೊಪ್ಪಳ:ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು.
ಉತ್ಸವಕ್ಕೆ ಸುತ್ತಲಿನ ಗ್ರಾಮಸ್ಥರು ರಂಗವಲ್ಲಿಯ ಮೆರಗು ನೀಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆನೆಗೊಂದಿ ಮತ್ತು ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಮುಖ್ಯ ಬೀದಿಯುದ್ದಕ್ಕೂ ಬಣ್ಣಬಣ್ಣದ ರಂಗೋಲಿಗಳು ರಾರಾಜಿಸುತ್ತಿವೆ.
ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ, ಸಾರಿಸಿ ಸಿಂಗರಿಸಲಾಗಿದೆ. ಪ್ಲಾಸ್ಟಿಕ್ ಫ್ಲೆಕ್ಸ್, ವಿನೈಲ್ ಬಳಕೆ ಕಡಿಮೆ ಮಾಡಿ ಮಾವಿನ ತೋರಣ, ಬಾಳೆ ಗೊನೆಗಳಿಂದ ಗ್ರಾಮಸ್ಥರು ತಮ್ಮ ಊರುಗಳನ್ನು ಅಲಂಕರಿಸಿಕೊಂಡಿರುವುದು ವಿಶೇಷ.
ಜಾತಿ ಧರ್ಮ, ಭಾಷೆ ಮತ್ತಿತರ ಎಲ್ಲೆ ಮೀರಿ ಹಿಂದೂ, ಮುಸ್ಲಿಂ ,ಕ್ರೈಸ್ತ ಕುಟುಂಬಗಳು ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ನಿಜಾರ್ಥದ ಭಾವೈಕ್ಯತೆ ಮೆರೆಯುತ್ತಿರುವ ದೃಶ್ಯಗಳನ್ನು ವಿದೇಶಿ ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯಗಳು ಆನೆಗೊಂದಿ ಮಾರ್ಗದುದ್ದಕ್ಕೂಕಂಡು ಬಂದವು.
ಆನೆಗೊಂದಿ ಉತ್ಸವ ನಮ್ಮ ಭಾಗದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆ ಸಾರುವ ಹೆಮ್ಮೆಯ ಆಚರಣೆಯಾಗಿದೆ, ಉತ್ಸವದ ಯಶಸ್ಸಿಗೆ ಗ್ರಾಮಸ್ಥರೆಲ್ಲರೂ ಕೈಜೋಡಿಸಿದ್ದಾರೆ ಎಂದು ಸಾಣಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.