ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಎಸ್‌ಎಫ್‌ಎಸ್ ಅಕಾಡೆಮಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸುವ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಶಾಲೆಯ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
2.30 ಲಕ್ಷ ಒರಿಗಮಿ ದೋಣಿಗಳನ್ನು (ಪೇಪರ್‌ನಲ್ಲಿ ಕಲಾಕುಸುರಿ) ಬಳಸಿ ರಾಷ್ಟ್ರಧ್ವಜ ತಯಾರಿಸಿದ್ದಾರೆ. 20 ಮೀಟರ್ ಉದ್ದ ಮತ್ತು 30 ಮೀಟರ್ ಅಗಲದ ಭಾರತ ಧ್ವಜವನ್ನು ದೋಣಿ ಮೂಲಕ ರಚಿಸಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6.30ರವರೆಗೆ ದೋಣಿಗಳನ್ನು ತಯಾರಿಸಿ ಕೇಸರಿ, ಬಿಳಿ, ಹಸಿರು ಬಣ್ಣಗಳ ರಾಷ್ಟ್ರಧ್ವಜ ತಯಾರಿಸಿದ್ದಾರೆ. 1,683 ವಿದ್ಯಾರ್ಥಿಗಳು, 140 ಶಿಕ್ಷಕರು ಧ್ವಜ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದರು. ‘ನನ್ನ ಭಾರತ ನನ್ನ ಹೆಮ್ಮೆ’ ಪರಿಕಲ್ಪನೆಯಡಿ ರಾಷ್ಟ್ರಧ್ವಜ ತಯಾರಿಸಿದ್ದಾರೆ.
ಒಂದು ಗಂಟೆಯಲ್ಲಿ ಅವಧಿಯಲ್ಲಿ ವಿದ್ಯಾರ್ಥಿಗಳು ಐದು ಸಾವಿರ ರಾಷ್ಟ್ರಧ್ವಜಕ್ಕೆ ಬಣ್ಣ ಹಚ್ಚುವ ವಿನೂತನ ದಾಖಲೆ ನಿರ್ಮಿಸಿದರು. ಒಂದೇ ಗುಂಪು ಬಣ್ಣ ಹಚ್ಚುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶೇಷ. ಶಿಕ್ಷಕರು ಕೂಡ ಇದರಲ್ಲಿ ಪಾಲ್ಗೊಂಡಿದ್ದರು.
1,210 ವಿದ್ಯಾರ್ಥಿಗಳು ಏಕಕಾಲದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ದಾಖಲೆ ನಿರ್ಮಿಸಿದ್ದಾರೆ. ಫಿಟ್ ಇಂಡಿಯಾ ಆಂದೋಲನಕ್ಕೆ ಬೆಂಬಲ ನೀಡಲು ಮತ್ತು ಆರೋಗ್ಯವೇ ಭಾಗ್ಯ ಎಂಬ ಪರಿಕಲ್ಪನೆಯಡಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೋಷಕರು ಸಾಕ್ಷಿ
ಪ್ರತಿ ಚುಟವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಾಲೆಯ ಎಲ್ಲ ವಿದ್ಯಾರ್ಥಿಗಳು ದಾಖಲೆ ನಿರ್ಮಿಸುವ ತವಕದಿಂದ ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಿದ್ದರು. 2.30ಲಕ್ಷ ಓರೆಗಾಮಿ ದೋಣಿಗಳ ಮೂಲಕ ಬೃಹತ್ ರಾಷ್ಟ್ರ ಧ್ವಜ ನಿರ್ಮಿಸಿ ರಾಷ್ಟ್ರ ಭಕ್ತಿ ಮೆರೆದಿದ್ದಾರೆ. ಪ್ರತಿ ಚಟುವಟಿಕೆಯಲ್ಲಿಯೂ ಒಂದು ಪರಿಕಲ್ಪನೆ ಉದ್ದೇಶವನ್ನಿಟ್ಟು ರಾಷ್ಟ್ರ ಭಕ್ತಿ, ಕ್ರೀಡಾ ಸ್ಫೂರ್ತಿಯಡಿ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಚಟುವಟಿಕೆಗಳಿಗೆ ಪೋಷಕರು ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.