ಆನೇಕಲ್ : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರಿಗೆ ಶನಿವಾರ ಕಣ್ಣೀರ ವಿದಾಯ ಹೇಳಲಾಯಿತು.
ನಿರೀಕ್ಷೆಗೂ ಮೀರಿ ಸಾವಿರಾರು ಮಂದಿ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಕುಟುಂಬದವರ ನೀರವ ಮೌನದ ನಡುವೆ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು.
ಶನಿವಾರ ಬೆಳಗ್ಗೆ 7ರಿಂದ 11ರವರೆಗೆ ಜಿಗಣಿ ಸಮೀಪದ ನಂದನವದ ಮನೆಯ ಮುಂಭಾಗ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಚಳಿಯನ್ನೂ ಲೆಕ್ಕಿಸದೆ ಸಹಸ್ರಾರು ಅಭಿಮಾನಿಗಳು ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಲು ನಂದನವನ ಬಡಾವಣೆಗೆ ಆಗಮಿಸಿದ್ದರು. ವಿವಿಧ ಶಾಲೆಯ ವಿದ್ಯಾರ್ಥಿಗಳು, ಸುತ್ತಮುತ್ತಲ ಗ್ರಾಮಸ್ಥರು, ಅಧಿಕಾರಿಗಳು, ಆಟೊ ರಿಕ್ಷಾ ಚಾಲಕರು, ಕಾರ್ಮಿಕರು ಪುಷ್ಪನಮನ ಸಲ್ಲಿಸಿದರು. ಸಾರ್ವಜನಿಕರ ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ಭಾರತೀಯ ಸೇನಾ ಪಡೆ, ಪೊಲೀಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಕೆಡೆಟ್‌ಗಳು ವೀರಯೋಧನಿಗೆ ಗೌರವ ವಂದನೆ ಸಲ್ಲಿಸಿದರು. ಗಾಯಕರು ದೇಶಭಕ್ತಿ ಗೀತೆಗಳ ಮೂಲಕ ಗೌರವ ಸಲ್ಲಿಸಿದರು.
ಪೊಲೀಸ್ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದ ನಂತರ ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಮರ್ಪಿಸಲಾಯಿತು. ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ದು ಅಲ್ಲಿ ಕುಟುಂಬದವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಅಲ್ಲಿಂದ ತೆರೆದ ಮಿಲಿಟರಿ ವಾಹನದಲ್ಲಿ ಅಂತಿಮ ಮೆರವಣಿಗೆ ಹೊರಟಿತು.
ಸೋಮಸುಂದರಪಾಳ್ಯದಲ್ಲಿ ವಿದ್ಯುತ್ ಚಿತಾಗಾರದಲ್ಲಿ 3.10ಕ್ಕೆ ಪ್ರಾಂಜಲ್ ಅಂತ್ಯಕ್ರಿಯೆ ನೆರವೇರಿತು. ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’, ‘ಅಮರ್ ರಹೇ ಪ್ರಾಂಜಲ್’ ಎಂಬ ಘೋಷಣೆ ಮುಗಿಲು ಮುಟ್ಟಿದ್ದವು.
ಸಂಸದ ಡಿ.ಕೆ.ಸುರೇಶ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಎಂ.ಕೃಷ್ಣಪ್ಪ, ಎಸ್.ಪಿ. ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ಪುರುಷೋತ್ತಮ್, ಉಪವಿಭಾಗಾಧಿಕಾರಿ ರಜನಿಕಾಂತ್, ತಹಶೀಲ್ದಾರ್ ಶಿವಪ್ಪಎಚ್. ಲಮಾಣಿ, ಡಿವೈಎಸ್‌ಪಿ ಮೋಹನ್ ಭಾಗವಹಿಸಿದ್ದರು.
ಮಳೆಯೊಂದಿಗೆ ಸುರಿದ ಹೂಮಳೆ
ಪ್ರಾಂಜಲ್ ಪಾರ್ಥಿವ ಶರೀರ ಹೊತ್ತ ತೆರೆದ ಮಿಲಿಟರಿ ವಾಹನ ಜಿಗಣಿ ಸಮೀಪದ ಓಟಿಸಿ ಸರ್ಕಲ್‌ಗೆ ಬರುತ್ತಿದ್ದಂತೆಯೇ ತುಂತುರು ಮಳೆ ಆರಂಭವಾಯಿತು. ರಸ್ತೆ ಉದಕ್ಕೂ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಯಾನಿಗಳು ಹೂ ಮಳೆಗರೆದರು. ನಂದನವನ ಬಡಾವಣೆಯಿಂದ ನೈಸ್ ರಸ್ತೆಯವರೆಗೂ ರಸ್ತೆಯ ಬದಿ ನಿಂತಿದ್ದ ವಿದ್ಯಾರ್ಥಿಗಳು ಸಾರ್ವಜನಿಕರು ವಾಹನ ಬರುತ್ತಿದ್ದಂತೆ ಹೂ ಎರಚಿ ನಮನ ಸಲ್ಲಿಸಿದರು. ರಾಷ್ಟ್ರಧ್ವಜ ಹಿಡಿದ ಯುವಕರು ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಪ್ರತಿ ವೃತ್ತದಲ್ಲೂ ವಿದ್ಯಾರ್ಥಿಗಳು ಬ್ಯಾಂಡ್ ಗೌರವ ಸಲ್ಲಿಸಿದರು.
ಅಪ್ಪನಿಂದ ಅಂತಿಮ ಸೆಲ್ಯೂಟ್
ಪ್ರಾಂಜಲ್ ಪಾರ್ಥಿವ ಶರೀರದ ಬಳಿ ಕೊನೆಯವರೆಗೂ ತಂದೆ ವೆಂಕಟೇಶ್ ತಾಯಿ ಅನುರಾಧ ಮತ್ತು ಪತ್ನಿ ಅಧಿತಿ ಹಾಗೂ ಕುಟುಂಬ ವರ್ಗದವರು ಮೌನವಾಗಿ ನಿಂತಿದ್ದರು. ಸೇನಾ ಮತ್ತು ಪೊಲೀಸರ ಗೌರವವಂದನೆ ಮುಗಿಯುತ್ತಿದ್ದಂತೆ ಎದ್ದು ನಿಂತ ವೆಂಕಟೇಶ್ ತಮ್ಮ ಮಗನಿಗೆ ಸೆಲ್ಯೂಟ್ ಹೊಡೆದರು.
ಕಟ್ಟುಮಸ್ತಾದ ದೇಹ: ಪ್ರಾಂಜಲ ಮನಸ್ಸು
‘ಪ್ರಾಂಜಲ್ ಕಟ್ಟುಮಸ್ತಾದ ದೇಹ ಹೊಂದಿದ್ದರೂ ಮಾತು ಮಾತ್ರ ಮೃದು. ಪ್ರಾಂಜಲ ಮನಸ್ಸಿನ ವಿನಯವಂತ ಮತ್ತು ಹೃದಯವಂತರಾಗಿದ್ದರು. ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿದ್ದರು’ ಎಂದು ನಿವೃತ್ತ ಯೋಧ ಭಾಸ್ಕರ್ ರೈ ಸ್ಮರಿಸಿದರು. ‘ಸುರತ್ಕಲ್‌ನಲ್ಲಿ ಪ್ರತಿದಿನ ನಮ್ಮ ಅಂಗಡಿಗೆ ಬಂದು ಸೇನೆಯ ಮತ್ತು ಕ್ರೀಡೆಯ ಬಗ್ಗೆ ಮಾತನಾಡುತ್ತಿದ್ದರು. ಪರೀಕ್ಷೆಗೆ ತಯಾರಿ ನಡೆಸಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದರು. ಅದರಂತೆ ಉನ್ನತ ಸ್ಥಾನಕ್ಕೇರಿದ್ದರು. ಆದರೆ ವಿಧಿ ಅವರನ್ನು ಬಹು ಬೇಗ ಕರೆದೊಯ್ದಿದೆ’ ಎಂದು ಸ್ಮರಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.