ಬೆಂಗಳೂರು: ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಭರವಸೆಯಿಂದ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
₹ 18 ಸಾವಿರ ಕನಿಷ್ಠ ವೇತನ ನಿಗದಿ ಮಾಡಬೇಕು, ₹ 3 ಸಾವಿರ ಪಿಂಚಣಿ ನೀಡಬೇಕು ಮತ್ತು ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ, ಕಾಯಂ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳ ಕಾರ್ಯಕರ್ತೆಯರು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಧರಣಿ ಆರಂಭಿಸಿದ್ದರು.
ಮೈ ಕೊರೆಯುವ ಚಳಿಯಲ್ಲಿಯೇ ರಾತ್ರಿ ಕಳೆದ ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯ ತಿಳಿಯುತ್ತಿದ್ದಂತೆ ಕುಮಾರಸ್ವಾಮಿ ಅವರು ಪ್ರತಿಭಟನಾನಿರತ ಮುಖಂಡರೊಂದಿಗೆ ಸಂಧಾನ ಸಭೆ ನಡೆಸುವುದಾಗಿ ಹೇಳಿದರು. ಆದರೆ, ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ ಜಾಫರ್ ಅವರಿಗೆ ಪ್ರತಿಭಟನಾ ಸ್ಥಳಕ್ಕೆ ತೆರಳುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಬಳಿಕ ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಜಾಫರ್, ‘ಪ್ರತಿಭಟನೆ ಕೈ ಬಿಡುವಂತೆ ತಿಳಿಸಲು ಮಖ್ಯಮಂತ್ರಿಯವರು ನನ್ನನ್ನು ಕಳುಹಿಸಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ನಿರತರಾಗಿರುವುದರಿಂದ ಅವರು ಬರಲು ಸಾಧ್ಯವಾಗಿಲ್ಲ. ಬೆಳಗಾವಿ ಅಧಿವೇಶನದ ನಂತರ ಎಲ್ಲರನ್ನೂ ಕರೆದು ಸಭೆ ನಡೆಸಲಿದ್ದಾರೆ. ಈಗಹೋರಾಟ ಕೈ ಬಿಡುವಂತೆ ತಿಳಿಸಿದ್ದಾರೆ’ ಎಂದು ಹೇಳಿದರು.
‘ಸಿ.ಎಂ ಸಂಧಾನ ಸಂದೇಶಕ್ಕೆ ಒಪ್ಪಿದ ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದಿದ್ದಾರೆ’ ಎಂದು ಎಐಟಿಯುಸಿ ಕಾರ್ಯದರ್ಶಿ ಎನ್.ಶಿವಣ್ಣ ತಿಳಿಸಿದರು.
* ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಂಬಿಕೆ ಉಳಿಸಿಕೊಳ್ಳದಿದ್ದರೆ ಮತ್ತೆ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ
-ಎನ್.ಶಿವಣ್ಣ, ಎಐಟಿಯುಸಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.