ಶಿವಮೊಗ್ಗ: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆಯಿಂದ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅನಾರೋಗ್ಯಕ್ಕೀಡಾಗಿ ಊರಿಗೆ ಮರಳಿದ್ದ ಶಿಕಾರಿಪುರ ತಾಲ್ಲೂಕಿನ ಇಡುಕ್ಕಿನ ಹೊಸಕೊಪ್ಪದ ಅಂಗನವಾಡಿ ಸಹಾಯಕಿ ನೀಲಮ್ಮ ದಾನಪ್ಪ ಗೌಡ (58) ಶುಕ್ರವಾರ ಸಾವಿಗೀಡಾಗಿದ್ದಾರೆ.
'ನೌಕರಿ ಕಾಯಂಗೊಳಿಸಬೇಕು. ನಮ್ಮನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಿಂದ ತೆರಳಿದ್ದ ನೀಲಮ್ಮ ಜನವರಿ 18 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ದಿಢೀರನೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಊರಿಗೆ ಕರೆತರಲಾಗಿತ್ತು. ಶಿಕಾರಿಪುರದಲ್ಲಿ ಅವರು ಸಾವಿಗೀಡಾಗಿದ್ದಾರೆ.
'ನೀಲಮ್ಮಗೆ ಅಸ್ತಮಾ ಇದ್ದು, ಬೆಂಗಳೂರಿನ ಚಳಿಯಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಊರಿಗೆ ವಾಪಸ್ ತೆರಳಿದ್ದರು. ಅಲ್ಲಿ ಸಾವಿಗೀಡಾಗಿದ್ದಾರೆ' ಎಂದು ಸಂಘಟನೆಯ ಶಿಕಾರಿಪುರದ ಪ್ರತಿನಿಧಿ ಭಾರತಿ 'ಪ್ರಜಾವಾಣಿ'ಗೆ ತಿಳಿಸಿದರು.
ಸಿದ್ದರಾಮಯ್ಯ ಆಕ್ರೋಶ: ನೀಲಮ್ಮ ಸಾವಿನ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.