ಬೆಂಗಳೂರು: ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮೂರು ತಿಂಗಳಾದರೂ ಗೌರವಧನ ಬಿಡುಗಡೆ ಆಗಿಲ್ಲ.
ರಾಜ್ಯದಲ್ಲಿ 69 ಸಾವಿರಕ್ಕಿಂತ ಅಧಿಕ ಅಂಗನವಾಡಿ ಕೇಂದ್ರಗಳಿವೆ. ಪ್ರತಿ ಅಂಗನವಾಡಿಯಲ್ಲಿ ಇಬ್ಬರಂತೆ ಸುಮಾರು 1.40 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರಿಗೆ ಈ ಕೆಲಸವೇ ಜೀವನಾಧಾರವಾಗಿದೆ. ಗೌರವಧನ ಬಿಡುಗಡೆ ಆಗದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
‘ಗೌರವಧನ ಬಿಡುಗಡೆ ಆದರೂ ಆಗದಿದ್ದರೂ ಕೆಲಸ ಮಾತ್ರ ಮುಂದುವರಿದಿದೆ. ಅಂಗನವಾಡಿಯಿಂದ ಒದಗಿಸಬೇಕಾದ ಸೇವೆಗಳ ಪ್ರಮಾಣ ಹೆಚ್ಚಾಗುತ್ತಲೇ ಇವೆ’ ಎಂದೂ ಅವರು ಹೇಳುತ್ತಾರೆ.
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಅ, ಆ, ಇ, ಈ ಕಲಿಸುವುದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸರ್ಕಾರದ ಮಹತ್ವದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ನಿಭಾಯಿಸುತ್ತಾರೆ. ಪೂರ್ವ ಪ್ರಾಥಮಿಕ ಶಿಕ್ಷಣ, ಆರೋಗ್ಯ ತಪಾಸಣೆ, ಪೌಷ್ಟಿಕ ಆಹಾರ ವಿತರಣೆ, ಸೇರಿದಂತೆ ನಾನಾ ಜಾಗೃತಿ ಕಾರ್ಯಕ್ರಮಗಳ ಹೊಣೆಗಾರಿಕೆಯೂ ಇವರ ಮೇಲಿದೆ.
‘ದಾವಣಗೆರೆ, ಹಾವೇರಿ, ಚಿಕ್ಕಮಗಳೂರಿನ ಮತ್ತು ರಾಯಚೂರು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಹಾಗೂ ಅಡುಗೆ ಅನಿಲ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ರಾಜ್ಯದ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ, ಅಡುಗೆ ಅನಿಲ ಖರೀದಿಗೆ ಅನುದಾನ ಬಿಡುಗಡೆ ಆಗಿಲ್ಲ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ದೂರಿದರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಜುಲೈ ತಿಂಗಳ ಗೌರವಧನ ಬಿಡುಗಡೆ ಆಗಿದೆ. ಆದರೆ, ಜೂನ್, ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೌರವಧನ ಬಿಡುಗಡೆಯಾಗಿಲ್ಲ. ಈ ಬಗ್ಗೆ ಇಲಾಖೆಯ ಯೋಜನಾಧಿಕಾರಿಗಳನ್ನು ಪ್ರಶ್ನಿಸಿದರೆ ನಿರ್ದೇಶಕರ ಕಚೇರಿಯಿಂದ ಅನುದಾನ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಗನವಾಡಿ ಸಿಬ್ಬಂದಿ ಹಬ್ಬಗಳನ್ನು ಆಚರಿಸಲಾಗುತ್ತಿಲ್ಲ. ನಿಯಮಿತವಾಗಿ ಸಂಬಳ ಬಾರದೇ ಇದ್ದರೆ ಜೀವನ ಸಾಗಿಸುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಪ್ರತಿಬಾರಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಬಿಡುಗಡೆಯಲ್ಲಿ ಸಮಸ್ಯೆ ಆಗುತ್ತಿದೆ. ಇದನ್ನು ಪರಿಹರಿಸಿ ಕೂಡಲೇ ಗೌರವಧನ ಬಿಡುಗಡೆಗೊಳಿಸಬೇಕು’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಆಗ್ರಹಿಸಿದರು. ‘ಕೇಂದ್ರ ಸರ್ಕಾರದಿಂದ ಅನುದಾನ ಬರಲಿ ಬಾರದೇ ಇರಲಿ ರಾಜ್ಯ ಸರ್ಕಾರ ಪ್ರತೀ ತಿಂಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನದ ಖಾತ್ರಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರ ಸರ್ಕಾರದಿಂದ ಅನುದಾನ ಬಾರದ ಕಾರಣ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಎರಡು ತಿಂಗಳ ಗೌರವಧನ ಬಾಕಿ ಇದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಎನ್. ಸಿದ್ದೇಶ್ವರ ಹೇಳಿದರು. ‘ಅನುದಾನ ಬಿಡುಗಡೆಯಾದ ತಕ್ಷಣ ಗೌರವಧನ ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್‌ವರೆಗೂ ಮೊಟ್ಟೆ ಖರೀದಿ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.