ADVERTISEMENT

ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ದಾಖಲೆಯ ಅಂತರದ ಗೆಲುವು

ಮೈತ್ರಿಗೆ ಮತದಾರರ ಸಮ್ಮತಿಯ ಮುದ್ರೆ

ಆರ್.ಜಿತೇಂದ್ರ
Published 6 ನವೆಂಬರ್ 2018, 6:45 IST
Last Updated 6 ನವೆಂಬರ್ 2018, 6:45 IST
   

ರಾಮನಗರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಮತದಾರರು ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಗೆ ಸಮ್ಮತಿಯ ಮುದ್ರೆ ಒತ್ತಿದ್ದಾರೆ.

ಈ ಗೆಲುವಿನ ಮೂಲಕ ಅನಿತಾ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾದ ಶಾಸಕ/ಶಾಸಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರ ಒಗ್ಗಟ್ಟಿನ ಪ್ರಚಾರದ ಫಲವಾಗಿ ಈ ಭಾರೀ ಗೆಲುವು ಸಾಧ್ಯವಾಗಿದೆ.

ಇದೇ ಮೊದಲ ಬಾರಿಗೆ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದೇ ಚುನಾವಣೆ ನಡೆದಿತ್ತು. ಮೈತ್ರಿ ಬಗ್ಗೆ ಕ್ಷೇತ್ರದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಆರಂಭದಲ್ಲಿ ಅಪಸ್ವರ ಕೇಳಿಬಂದಿತ್ತು. ಅದರಲ್ಲಿಯೂ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ, ಕಳೆದ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಹುಸೇನ್‌ ಸಹಿತ ಸ್ಥಳೀಯ ಮುಖಂಡರೇ ಬಂಡಾಯದ ಬಾವುಟ ಬೀಸಿದ್ದರು. ರಾಮನಗರ, ಹಾರೋಹಳ್ಳಿ, ಮರಳವಾಡಿಗಳಲ್ಲಿ ಪ್ರಚಾರದ ವೇಳೆಯೇ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನಾಯಕರಿಗೆ ಮಾತಿನ ಚಾಟಿ ಬೀಸಿದ್ದರು.

ADVERTISEMENT

ನುಂಗಲಾರದ ತುಪ್ಪವಾಗಿದ್ದ ಮೈತ್ರಿ ಬಿಕ್ಕಟ್ಟನ್ನು ಅಷ್ಟೇ ನಾಜೂಕಾಗಿ ನಿಭಾಯಿಸಿದವರು ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್‌ ಸಹೋದರರು. ಅದರಲ್ಲೂ ಸುರೇಶ್ ಇಡೀ ಚುನಾವಣೆಯ ಪ್ರಚಾರದಲ್ಲಿ ಅನಿತಾರ ಬೆನ್ನಿಗೆ ನಿಂತು ಕೆಲಸ ಮಾಡಿದರು. ಬಂಡಾಯದ ಸದ್ದು ಅಡಗಿಸಿ ಮುನ್ನಡೆದರು. ಈ ಮೂಲಕ ಮುಂಬರುವ ಲೋಕಸಭೆ ಚುನಾವಣೆಗೆ ತಮ್ಮ ಹಾದಿಯನ್ನು ಸಲೀಸು ಮಾಡಿಕೊಂಡರು.

ಬೆಲೆ ತೆತ್ತ ಬಿಜೆಪಿ: ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸುವ ಕನಸು ಹೊತ್ತಿದ್ದ ಬಿಜೆಪಿಯು ತನ್ನ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದಕ್ಕೆ ತಕ್ಕ ಬೆಲೆಯನ್ನೇ ತೆತ್ತಿದೆ. ಮತದಾನಕ್ಕೆ ಇನ್ನೆರಡೇ ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಇದರಿಂದ ಕಮಲ ಪಾಳಯಕ್ಕೆ ಅಘಾತವಾಗಿತ್ತು. ಹದಿನೈದು ದಿನಗಳ ಕಾಲ ಸಾವಿರಾರು ಕಾರ್ಯಕರ್ತರು ಮಾಡಿದ್ದ ಪ್ರಚಾರವೆಲ್ಲ ಹೊಳೆಯಲ್ಲಿ ಹುಣಸೆಹುಳಿ ತೋಳೆದಂತೆಆಗಿತ್ತು.

ಇದು ಇಷ್ಟಕ್ಕೆ ಮುಗಿಯಲಿಲ್ಲ. ಚುನಾವಣೆಯ ಹಿಂದಿನ ದಿನ ಚಂದ್ರಶೇಖರ್ ತಮ್ಮ ಅಧಿಕೃತ ಚುನಾವಣಾ ಏಜೆಂಟರಾದ ಪದ್ಮನಾಭ್‌ ಅವರನ್ನು ಹಿಂದಕ್ಕೆ ಪಡೆಯುವುದಾಗಿ ಚುನಾವಣಾ ಅಧಿಕಾರಿಗೆ ಪತ್ರ ನೀಡಿದ್ದರು. ಇದರಿಂದಾಗಿ ಪದ್ಮನಾಭ್‌ ಮಾನ್ಯತೆ ರದ್ದಾಗುವ ಜೊತೆಗೆ ಕ್ಷೇತ್ರದ ಒಟ್ಟು 277 ಮತಗಟ್ಟೆಗಳ ಬಿಜೆಪಿ ಏಜೆಂಟರ ಮಾನ್ಯತೆಯೂ ರದ್ದಾಯಿತು. ಇದರಿಂದಾಗಿ ಯಾವ ಮತಗಟ್ಟೆಯ ಒಳಗೂ ಬಿಜೆಪಿ ಏಜೆಂಟರು ಕಾಲಿಡಲು ಆಗಲಿಲ್ಲ.

ನೋಟಾ ಪ್ರಯೋಗವೂ ಹೆಚ್ಚು

ಕ್ಷೇತ್ರದಲ್ಲಿ ಹಿಂದೆಂದಿಗಿಂತ ಅತಿ ಹೆಚ್ಚು ಪ್ರಮಾಣದಲ್ಲಿ ನೋಟಾ ಮತಗಳು ಪ್ರಯೋಗವಾಗಿರುವುದು ಮತದಾರರ ಸಿಟ್ಟನ್ನೂ ಬಿಂಬಿಸಿದೆ.
ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1114 ನೋಟಾ ಮತಗಳು ಚಲಾವಣೆ ಆಗಿದ್ದವು.

ಮೊದಲ ಮಹಿಳಾ ಶಾಸಕಿ

ರಾಮನಗರ ವಿಧಾನಸಭೆ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾದ ಗೌರವಕ್ಕೆ ಅನಿತಾ ಕುಮಾರಸ್ವಾಮಿ ಪಾತ್ರರಾಗಿದ್ದಾರೆ. ರಾಮನಗರ ಜಿಲ್ಲೆಯ ಮೊದಲ ಶಾಸಕಿ ಎಂಬ ಶ್ರೇಯವೂ ಇವರದ್ದೇ. ಈ ಹಿಂದೆ ಬೆರಳೆಣಿಕೆಯಷ್ಟು ಮಹಿಳೆಯರು ಇಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರಾದರೂ ಗೆಲುವು ಅವರ ಕೈ ಹಿಡಿದಿರಲಿಲ್ಲ.

2008ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಮಮತಾ ಹೆಗಡೆ ನಿಚ್ಚಾನಿ ಅವರನ್ನು ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಪುತ್ರಿಯಾದ ಮಮತಾ ತೀವ್ರ ಸ್ಪರ್ಧೆ ಒಡ್ಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ 23,678 ಮತಗಳನ್ನು ಪಡೆಯುವ ಮೂಲಕ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.