ಗಂಗಾವತಿ (ಕೊಪ್ಪಳ ಜಿಲ್ಲೆ): ‘ತಾಲ್ಲೂಕಿನ ಆನೆಗೊಂದಿಯ ಕಿಷ್ಕಿಂಧಾ ಪ್ರದೇಶದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ' ಎಂದು ಈ ಭಾಗದ ಇತಿಹಾಸಕಾರರು, ಸಂಶೋಧಕರು ಪ್ರತಿಪಾದಿಸಿದರು.
ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅವರು ದಾಖಲೆಗಳನ್ನು ಪ್ರದರ್ಶಿಸಿದರು.
‘ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ (ಟಿಟಿಡಿ) ನೀಡಿರುವ ದಾಖಲೆ ಯಾವುದೇ ಕಾರಣಕ್ಕೂ ಸ್ವೀಕಾರ ಅರ್ಹವಲ್ಲ. ಅವರ ದಾಖಲೆ
ಗಳಲ್ಲಿ ಗೊಂದಲವಿದೆ. ಅದಕ್ಕೆ ಮಹತ್ವ ನೀಡಬಾರದು. ಅದು ಸುಳ್ಳು’ ಎಂದು ಶಾಸಕ ಪರಣ್ಣ ಮುವನಳ್ಳಿ ಹೇಳಿದರು.
‘ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿಯೇ ಎನ್ನುವ ನಂಬಿಕೆಯಿಂದ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿವೆ. ಟಿಟಿಡಿ ಜನರ ಭಾವನೆ ಬದಲಿಸಲುಹೊರಟಿದೆ’ ಎಂದು ಆಕ್ರೋಶ ವ್ಯಕ್ತ
ಪಡಿಸಿದರು.
ಇತಿಹಾಸಕಾರ, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ‘ಕಿಷ್ಕಿಂಧಾ ತುಂಗಭದ್ರಾ ನದಿ ತಟದ ಪ್ರದೇಶ ಎಂದು ಟಿಟಿಡಿಯೇ ಒಪ್ಪಿದೆ. ಆದರೆ, ಹನುಮ ಜನಿಸಿದ್ದು, ತಿರುಪತಿ ಸಮೀಪದ ಅಂಜನಾದ್ರಿ ಎಂದು ಅವರು ಹೇಳುತ್ತಿರುವುದರಲ್ಲಿಯೇಗೊಂದಲವಿದೆ’ ಎಂದರು.
‘ವಾಲ್ಮೀಕಿ ರಾಮಾಯಣ ವರ್ಣಿಸಿದ ಕಿಷ್ಟಿಂಧೆಯ ಎಲ್ಲ ರೂಪಗಳನ್ನು ನಮ್ಮ ಅಂಜನಾದ್ರಿ ಪ್ರದೇಶ ಒಳಗೊಂಡಿದೆ. ವಾಲಿಸುಗ್ರೀವರ ನಾಡು, ವಾನರ ವೀರರ ಬೀಡು ಎಂದು ವರ್ಣಿಸಲಾಗಿದೆ. ವಾನರ ವೀರ ಹನುಮಂತ ಇಲ್ಲಿಯವನೇ ಎನ್ನುವುದು ಸಾರ್ವಕಾಲಿಕ ಸತ್ಯ. ಈಗ ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ವಾಲಿ ಕಿಲ್ಲಾ, ಶಬರಿ ಗುಡ್ಡ, ಪಂಪಾ ಸರೋವರ, ಋಷ್ಯಮುಖ ಪರ್ವತ, ಮಾತಂಗ ಪರ್ವತ, ಅಂಜನಾದ್ರಿ ಇಲ್ಲಿಯೇ ಇವೆ. ಯಾವ ಆಧಾರದ ಮೇಲೆ ಅವರು ದಾಖಲೆ ಬಿಡುಗಡೆ ಮಾಡಿದ್ದಾರೆ ಎಂಬುವುದೇ ತಿಳಿಯುತ್ತಿಲ್ಲ. ಪ್ರಸಿದ್ಧ ಇತಿಹಾಸಕಾರರ ಸಂಶೋಧನೆ ನಮ್ಮ ಪ್ರದೇಶಗಳ ಮೇಲೆಯೇ ನಡೆದಿದೆ’ ಎಂದರು.
‘ರಾಮನಿಗಾಗಿ ಶಬರಿ ಕಾಯುತ್ತ ಇದ್ದದ್ದು ಕೂಡ ಆನೆಗೊಂದಿಯ ಪಂಪಾ ಸರೋವರ ಎನ್ನುವಲ್ಲಿ ಎಂಬ ನಂಬಿಕೆ ಇದೆ. ರಾಮನಿಗೆ ಆಂಜನೇಯ ಪರಿಚಯವಾಗಿದ್ದು, ಆನೆಗೊಂದಿಯಲ್ಲಿಯೇ. ಅಷ್ಟೇ ಅಲ್ಲದೆ ಸ್ಥಳೀಯವಾಗಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ. ಜನಪದರು ಹಾಡುಕಟ್ಟಿ ಹಾಡಿದ್ದಾರೆ. ಶಾಸನಗಳು, ಗ್ರಂಥಗಳು ಇವೆ’ ಎಂದು ಹೇಳಿದರು.
ದಾಖಲೆಗಳು
ವಾಲ್ಮೀಕಿ ರಚಿಸಿದ ರಾಮಾಯಣದ ಸುಂದರ ಕಾಂಡದ ಕಿಷ್ಕಿಂಧೆಯ ವರ್ಣನೆ, ವಾಲೀಸುಗ್ರೀವರ ಕದನ, ರಾಮ-ಹನುಮನ ಭೇಟಿ, ಶಬರಿ ರಾಮನಿಗೆ ಕಾಯ್ದ ಸ್ಥಳ, ವಿವಿಧ ಚಿತ್ರಪಟಗಳು, ಶಾಸನದ ಪ್ರತಿಗಳು, ಸ್ಕಂದ ಸೇರಿದಂತೆ ವಿವಿಧ ಪುರಾಣಗಳ ಪ್ರತಿ, ಜಾನಪದ ಹಾಡುಗಳ ಪುಸ್ತಕ, ಸಂಶೋಧಕರ ಸಂಶೋಧನಾ ಕೃತಿಗಳು, ವಿಜಯನಗರ ಸೇರಿದಂತೆ ಹಿಂದಿನ ಪಾಳೆಯಗಾರರ ಆಡಳಿತ ಅವಧಿಯಲ್ಲಿನ ಹಸ್ತಪ್ರತಿಗಳ ದಾಖಲೆ, ಕೇಂದ್ರ ಸರ್ಕಾರದ ಪುರಾ
ತತ್ವ ಇಲಾಖೆ ಸ್ಥಳದ ಮಹಿಮೆ ಸಾರುವ ಪುಸ್ತಕಗಳನ್ನು ಪ್ರದರ್ಶನ ಮತ್ತು ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.