ADVERTISEMENT

ಆಂಜನೇಯ ಜನ್ಮಸ್ಥಳ ವಿವಾದ: ತಜ್ಞರ ಅಸಮಾಧಾನ

ಕೊಪ್ಪಳದ ಕಿಷ್ಕಿಂದಾ ಪ್ರದೇಶದ ಅಂಜನಾದ್ರಿಯೇ ಜನ್ಮಭೂಮಿ: ಇತಿಹಾಸಕಾರರ ಪ್ರತಿಪಾದನೆ

ಸಿದ್ದನಗೌಡ ಪಾಟೀಲ
Published 11 ಏಪ್ರಿಲ್ 2021, 19:31 IST
Last Updated 11 ಏಪ್ರಿಲ್ 2021, 19:31 IST
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯ ಸ್ವಾಮಿ ಗುಡಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯ ಸ್ವಾಮಿ ಗುಡಿ   

ಕೊಪ್ಪಳ: ಆನೆಗೊಂದಿ ಸಮೀಪದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಜಿಲ್ಲೆಯ ಮತ್ತು ದೇಶದ ಖ್ಯಾತ ಇತಿಹಾಸ ತಜ್ಞರು ವಾದ ಮಂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎದ್ದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಸ್ಥಳದ ಕುರಿತು ಇತಿಹಾಸ ರಚಿಸಲು ಶಾಸನ, ಗ್ರಂಥ, ಪರಿಸರ, ಸ್ಮಾರಕಗಳು ಹಾಗೂ ಜಾನಪದ ಸಾಹಿತ್ಯ ಪರಿಗಣಿಸಲಾಗಿರುತ್ತದೆ. ‘ಈಗ ಹನುಮ ಜನಿಸಿದ್ದು ತಿರುಪತಿಯ ಅಂಜನಾದ್ರಿ ಪರ್ವತದಲ್ಲಿ, ಗೋಕರ್ಣದಲ್ಲಿ ಎಂಬ ಅನಪೇಕ್ಷಿತ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇತಿಹಾಸಕ್ಕೆ ಅಪಚಾರ ಸಲ್ಲದು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಲ್ಲಿರುವ ಅಂಜನಾದ್ರಿ, ಹನುಮನಹಳ್ಳಿ, ಕಿಷ್ಕಿಂದಾ ಪರ್ವತ, ವಾಲಿ ಕಿಲ್ಲಾ, ಶಬರಿ ಗುಡ್ಡ, ಸೀತಾ ಮಾತೆಯ ಮಂದಿರ, ರಾಮ-ಲಕ್ಷ್ಮಣರು ಭೇಟಿ ನೀಡಿದ ಕುರುಹು, ವಾಲ್ಮೀಕಿ ರಾಮಾಯಣ, ಶ್ರೀರಾಮ ಚರಿತ ಮಾನಸ ಸೇರಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಹುನುಮ ಉದಯಿಸಿದ ನಾಡು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಎಂಬ ನಿರ್ಧಾರಕ್ಕೆ ಬರಲಾಗಿದೆ.

ADVERTISEMENT

ಆಂಜನಾದ್ರಿ ಪರ್ವತ ಇತ್ತೀಚೆಗೆ ದೇಶ-ವಿದೇಶ ಸೇರಿದಂತೆ ಅಂತರರಾಷ್ಟ್ರೀಯ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿಗೆ ಬರುತ್ತಿದೆ. ಇದರ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ಹಣ ವಿನಿಯೋಗಿಸಲು ಸಜ್ಜಾಗಿದೆ. ನಿತ್ಯ 10 ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಆಸ್ತಿಕ ಭಕ್ತರು ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳಲ್ಲಿ ಅಂಜನಾದ್ರಿಗೆಮೊದಲ ಪ್ರಾಶಸ್ತ್ಯನೀಡುತ್ತಾರೆ.

ಇದು ರಾಮಭಕ್ತ ಹನುಮಂತ ಜನಿಸಿದ ನಾಡು ಎಂದು ರಾಮಾಯಣದ ಕಾಲದಿಂದಲೂ ಇಲ್ಲಿಯವರೆಗೆ ನಂಬಿಕೊಂಡು ಬರಲಾಗಿದೆ. ಭಾರತದಲ್ಲಿ ಹನುಮ ಮಂದಿರ ಇರದ ಊರೇ ಇಲ್ಲ. ಅಷ್ಟೊಂದು ಪ್ರಸಿದ್ಧಿ, ಪ್ರಚಾರ ಪಡೆದ ಈ ದೇವರಿಗೆ ಪೂಜೆಯಲ್ಲಿ ಅಗ್ರಸ್ಥಾನ. ಸ್ವಾಮಿ ಭಕ್ತಿ, ಶಕ್ತಿ, ವೀರತ್ವ, ನೈತಿಕ ನಿಷ್ಠೆಗೆ ಹನುಮ ಆದರ್ಶ. ಅಂಥ ಹನುಮನ ಸ್ಮರಣೆಗೆ ಇಲ್ಲಿಗೆ ಬಂದು ‘ಹನುಮಾನ್ ಚಾಲೀಸಾ’ ಪಠಣ ಮಾಡುವುದು ನಡೆದೇ ಇದೆ.

‘ಆನೆಗೊಂದಿ ಸಮೀಪದ ಅಂಜನಹಳ್ಳಿ, ಹನುಮನಹಳ್ಳಿ, ಅಂಜನಾದ್ರಿ ಹನುಮಂತ ಜನಿಸಿರುವುದಕ್ಕೆ ಇಂದಿಗೂ ಪುರಾವೆ ನೀಡುತ್ತವೆ. ಬ್ರಿಟಿಷ್‌ ಇತಿಹಾಸಕಾರರಿಂದ ಹಿಡಿದು ದೇಶದ ಖ್ಯಾತ ಇತಿಹಾಸ ತಜ್ಞರು ಕಿಷ್ಕಿಂದಾ ಪ್ರದೇಶದ ಅಂಜನಾದ್ರಿಯೇ ಹನುಮಂತನ ಜನ್ಮಸ್ಥಳ ಎಂದು ಸಾರಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಅಂಜನಾದೇವಿ, ಆಂಜನೇಯ, ಹನುಮಂತ ಎಂಬ ಹೆಸರು ಇಟ್ಟುಕೊಂಡವರು ಲಕ್ಷ ಸಂಖ್ಯೆಯಲ್ಲಿ ಸಿಗುತ್ತಾರೆ’ ಎನ್ನುತ್ತಾರೆ ಖ್ಯಾತ ಸಾಹಿತಿ ಪ್ರೊ.ಎಚ್‌.ಎಸ್‌.ಪಾಟೀಲ.

ಇಲ್ಲಿಯ ಶಾಸನಗಳ ಕುರಿತು ವ್ಯಾಪಕ ಅಧ್ಯಯನ ಮಾಡಿರುವ ಡಾ.ಶರಣಬಸಪ್ಪ ಕೋಲ್ಕಾರ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ ಅವರು ಸಹಮತ ವ್ಯಕ್ತಪಡಿಸುತ್ತಾರೆ. ‘ಹೀಗಾಗಿ ಇದು ಅನಗತ್ಯ ವಿವಾದ. ಇದನ್ನು ಕೈಬಿಟ್ಟು ಜಿಲ್ಲೆಯ ಪ್ರಮುಖ ಪೌರಾಣಿಕ ಸ್ಮಾರಕ ಉಳಿಸಬೇಕು’ ಎಂದರು.

ಏನಿದು ವಿವಾದ..?

ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನದಲ್ಲಿ ಯುಗಾದಿ ಮುನ್ನಾದಿನದಂದು ಸಾಕ್ಷ್ಯ (ಮಳೆ, ರಾಶಿ ಭವಿಷ್ಯ) ನುಡಿಯುವ ಕಾರ್ಯಕ್ರಮ ಜರುಗುತ್ತದೆ. ಇಲ್ಲಿ ಆಂಜನೇಯ ಜನಿಸಿದ್ದು, ತಿರುಮಲದ ಅಂಜನಾದ್ರಿ ಎಂಬ ಹೇಳಿಕೆ ನೀಡಿದೆ. ಈ ಕುರಿತು ಸಾಕ್ಷ್ಯ ನೀಡಲು ಸಿದ್ಧ ಎಂದು ಹೇಳುತ್ತಿದ್ದಾರೆ.

ಇದಕ್ಕೆ ತೆಲುಗುದೇಶಂ ಪಕ್ಷದ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದು, ರಾಜಕೀಯ ನುಸುಳುತ್ತಿದೆ. ಅಲ್ಲಿನ ಇತಿಹಾಸಕಾರ ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ನ ನಿವೃತ್ತ ನಿರ್ದೇಶಕ ಪ್ರೊ.ವೆಂಕಟರಮಣ ರೆಡ್ಡಿ ಪ್ರತಿಕ್ರಿಯಿಸಿ ‘ಅನಗತ್ಯ ವಿವಾದ ಸಲ್ಲದು. ದೇವರ ಮೂಲ ಹುಡುಕುವುದು ಬೇಡ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ದೇವಸ್ಥಾನದ ಪ್ರಧಾನ ಅರ್ಚಕರು ಮತ್ತು ವೇದಾಂತಿಗಳು ಇದರಿಂದ ಅಂತರ ಕಾಪಾಡಿಕೊಂಡಿದ್ದು, ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂಬ ವಾದಕ್ಕೆ ಪುರಾವೆ ದೊರೆತಂತೆ ಆಗಿದೆ.

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹನುಮನ ಜನ್ಮಸ್ಥಳ ಗೋಕರ್ಣ, ಕರ್ಮಭೂಮಿ ಆನೆಗೊಂದಿಯ ಅಂಜನಾದ್ರಿ ಎಂದು ಹೇಳಿಕೆ ನೀಡಿರುವುದಕ್ಕೆ ಹೊಸವಿವಾದ ಉಂಟಾಗಿದೆ.

***

ಅಂಜನಾದ್ರಿ ಪರ್ವತ ಹನುಮಂತನ ಜನ್ಮಸ್ಥಳ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಟಿಟಿಡಿ ವಾದವೇನೇ ಇರಲಿ. ಜನ್ಮ, ಕರ್ಮಭೂಮಿ ಇದೇ

- ಡಾ.ಎಚ್.ಎಸ್‌.ಪಾಟೀಲ, ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.