ಕೊಪ್ಪಳ: ‘ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ. ಸಾವಿರಾರು ವರ್ಷಗಳಿಂದ ಇದು ಜನಜನಿತ. ಜನರ ನಂಬಿಕೆಗಿಂತ ಬೇರೆ ಪುರಾವೆ ಬೇಕಿಲ್ಲ. ಆಂಜನೇಯ ಜನಿಸಿದ್ದು ಅಂಜನಾದ್ರಿಯಲ್ಲೇ ಎಂಬುದನ್ನು ಸಾವಿರ ಸಲ ಬೇಕಾದರೂ ಹೇಳುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದರು.
ಅಂಜನಾದ್ರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ರಾಮಾಯಣ ಮತ್ತು ಹಲವು ಪುರಾಣಗಳಲ್ಲಿ ಅಂಜನಾದ್ರಿ ಬೆಟ್ಟ ಕಿಷ್ಕಿಂದೆಯ ಉಲ್ಲೇಖವಿದೆ’ ಎಂದರು.
‘ಹನುಮ ಜನಿಸಿದ ಕ್ಷೇತ್ರದ ಬಗ್ಗೆ ಹಲವು ರಾಜ್ಯಗಳು ವಾದ ಮಂಡಿಸುತ್ತಿವೆ. ಆದರೆ, ದೇಶದ ಮೂಲೆಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಇದನ್ನು ಪದೇ ಪದೇ ಚರ್ಚಿಸುವ ಅಗತ್ಯವೂ ಇಲ್ಲ’ ಎಂದರು.
‘ಅಂಜನಾದ್ರಿಗೆ ಬರಲು ಯಾತ್ರಿಕರಿಗೆ ಸಂಪರ್ಕ ರಸ್ತೆ, ವಸತಿ ವ್ಯವಸ್ಥೆ, ಯಾತ್ರಿ ನಿವಾಸ, ಆಸ್ಪತ್ರೆ, ಪಾರ್ಕಿಂಗ್, ಮಾರುಕಟ್ಟೆ ಹೀಗೆ ಮೂಲಸೌಲಭ್ಯ ಕಲ್ಪಿಸಲು ₹100 ಕೋಟಿ ಒದಗಿಸಲಾಗಿದೆ. ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲಾಗುವುದು. ಮೈಸೂರು, ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು’ ಎಂದರು.
‘ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಸಮಯ ವ್ಯರ್ಥ ಮಾಡದೇ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಿ, ಎಂಟು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಹನುಮಾನ್ ಚಾಲೀಸಾ ಪಠಣ
ಅಂಜನಾದ್ರಿಯ ಬೆಟ್ಟದ ಕೆಳಭಾಗದಲ್ಲಿ ಮುಖ್ಯಮಂತ್ರಿ ಅವರು ದೇವರ ಪಾದುಕೆಗೆ ಪೂಜೆ ಸಲ್ಲಿಸಿ, ಹನುಮಾನ್ ಚಾಲೀಸಾ ಪಠಿಸಿದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮುಖ್ಯಮಂತ್ರಿಗೆ ಬೆಳ್ಳಿಯ ಹನುಮಮೂರ್ತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.