ನವದೆಹಲಿ: ಕರ್ನಾಟಕದ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಸೇರಿದಂತೆ ದೇಶದ ಐದು ಜೌಗು ಪ್ರದೇಶಗಳು ’ರಾಮ್‌ಸರ್’ ಪಟ್ಟಿಗೆ ಸೇರ್ಪಡೆಯಾಗಿವೆ.
ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಬುಧವಾರ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಜೌಗುಪ್ರದೇಶಗಳನ್ನು ಉಳಿಸಲು 1971ರ ಫೆಬ್ರುವರಿ 2ರಂದು ಇರಾನ್‌ನ ಕ್ಯಾಸ್ಪಿಯನ್ ಸಮುದ್ರತೀರದ ‘ರಾಮ್‌ಸರ್’ನಲ್ಲಿ ಪ್ರಥಮ ಬಾರಿಗೆ ಒಪ್ಪಂದ ಏರ್ಪಟ್ಟಿತ್ತು. ಆ ಒಪ್ಪಂದದ ಬಳಿಕ, ನೈಸರ್ಗಿಕವಾಗಿ ರೂಪುಗೊಂಡ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು, ಅಂತಹ ಪ್ರದೇಶಗಳನ್ನು ‘ರಾಮ್‌ಸರ್ ತಾಣ’ಗಳೆಂದು ಗುರುತಿಸಲಾಗುತ್ತದೆ.
ರಾಜ್ಯದ ಮೂರೂ ಜೌಗು ಪ್ರದೇಶಗಳನ್ನು ರಾಮ್‌ಸರ್ ಪಟ್ಟಿಗೆ ಸೇರಿಸಬೇಕು ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಕಳೆದ ವರ್ಷ ಶಿಫಾರಸು ಮಾಡಿತ್ತು. ಈಗ ಆ ಮಾನ್ಯತೆ ಸಿಕ್ಕಿದೆ. ದೇಶದಲ್ಲಿನ ‘ರಾಮ್‌ಸರ್ ತಾಣ’ಗಳ ಸಂಖ್ಯೆ 80ಕ್ಕೆ ಏರಿದೆ. ರಂಗನತಿಟ್ಟು ಪಕ್ಷಿಧಾಮವನ್ನು 2022ರ ಆಗಸ್ಟ್‌ನಲ್ಲಿ ಈ ಪಟ್ಟಿಗೆ ಸೇರಿಸಲಾಗಿತ್ತು.
ಅಂಕಸಮುದ್ರ ಪಕ್ಷಿ ಸಂರಕ್ಷಣಾ ಪ್ರದೇಶಕ್ಕೆ ಶತಮಾನದ ಹಿನ್ನೆಲೆ ಇದೆ. ಅಂಕಸಮುದ್ರ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಈ ತಾಣವು 244 ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿ 210 ಜಾತಿಯ ಸಸ್ಯಗಳು, 8 ಜಾತಿಯ ಸಸ್ತನಿಗಳು, 25 ಜಾತಿಯ ಸರೀಸೃಪಗಳು, 240 ಜಾತಿಯ ಪಕ್ಷಿಗಳು, 41 ಜಾತಿಯ ಮೀನುಗಳು, 3 ಜಾತಿಯ ಕಪ್ಪೆಗಳು, 27 ಜಾತಿಯ ಚಿಟ್ಟೆಗಳು ಇವೆ.
4,801 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಅಘನಾಶಿನಿ ಅಳಿವೆಯು ಅಘನಾಶಿನಿ ನದಿಯು ಅರಬ್ಬೀ ಸಮುದ್ರದೊಂದಿಗೆ ಸೇರುವ ಸ್ಥಳದಲ್ಲಿ ರೂಪುಗೊಂಡಿದೆ. ಈ ಪ್ರದೇಶದಲ್ಲಿ ಮೀನುಗಾರಿಕೆ, ಕೃಷಿ, ಏಡಿಗಳ ಸಂಗ್ರಹ, ಸಿಗಡಿ ಸಾಕಣೆ, ಸಾಂಪ್ರದಾಯಿಕ ಮೀನು ಸಾಕಣೆ ನಡೆಯುತ್ತಿದ್ದು, ಸುಮಾರು 7,500 ಕುಟುಂಬಗಳ ಜೀವನೋಪಾಯಕ್ಕೆ ಈ ಚಟುವಟಿಕೆಗಳು ನೆರವಾಗಿವೆ.
ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶವು 50 ಹೆಕ್ಟೇರ್‌ನಲ್ಲಿ ಹರಡಿದೆ. ಇದು 166 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಚಳಿಗಾಲದಲ್ಲಿ ಇಲ್ಲಿಗೆ 8 ಸಾವಿರ ಪಕ್ಷಿಗಳು ಬರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.